ಕಷ್ಟಕಾರ್ಪಣ್ಯಗಳ ನಡುವೆ ದೇವರಲ್ಲಿ ಭರವಸೆಯಿಟ್ಟು, ಅವರ ಸಾಕ್ಷಿಗಳಾಗಿ ಬಾಳೋಣ-  ಬೆಳ್ತಂಗಡಿ ಬಿಷಪ್ ಲೋರೆನ್ಸ್ ಮುಕುಝಿ

Spread the love

ಕಷ್ಟಕಾರ್ಪಣ್ಯಗಳ ನಡುವೆ ದೇವರಲ್ಲಿ ಭರವಸೆಯಿಟ್ಟು, ಅವರ ಸಾಕ್ಷಿಗಳಾಗಿ ಬಾಳೋಣ-  ಬೆಳ್ತಂಗಡಿ ಬಿಷಪ್ ಲೋರೆನ್ಸ್ ಮುಕುಝಿ

“ಪ್ರಾಪಂಚಿಕ ಅನುಭವಗಳಾದ ಕಷ್ಟಕಾರ್ಪಣ್ಯಗಳು, ದುಷ್ಟತನಗಳು ನಮ್ಮನ್ನು ಧೃತಿಗೆಡುವಂತೆ ಮಾಡುತ್ತವೆ. ಪವಿತ್ರ್ ಆತ್ಮರ ಕೃಪೆಯಿಂದ ಅವುಗಳ ಮೇಲೆ ಜಯ ಸಾಧಿಸಿ, ದೇವರಲ್ಲಿ ಅಚಲ ನಂಬಿಕೆಯಿಟ್ಟು ಅವರ ಸಾಕ್ಷಿಗಳಾಗಿ ಬಾಳಿದಾಗ ಮತ್ತು ಒಳಿತನ್ನು ಮಾಡಿದಾಗ ನಾವು ಆಶಿರ್ವಾದವನ್ನು ಪಡೆಯುತ್ತೇವೆ” ಎಂದು ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಲೋರೆನ್ಸ್ ಮುಕುಝಿ ಪ್ರಬೋಧನೆ ನೀಡಿದರು. ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಜನವರಿ 22ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರದಂದು ಈ ಪುಣ್ಯಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಅಸ್ವಸ್ಥರಿಗಾಗಿ ವಿಶೇಷವಾಗಿ ಪೂಜೆ ಪ್ರಾರ್ಥನೆಗಳ್ನು ನೆರವೇರಿಸಲಾಯಿತು.

ದಿನದ ಏಕೈಕ ಪ್ರಮುಖ ಬಲಿಪೂಜೆಯನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಲೋರೆನ್ಸ್ ಮುಕುಝಿಯವರು ನೆರವೇರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಟಗುರು ಅತಿ ವಂದನೀಯ ಮ್ಯಾಕ್ಸಿಮ್ ನೊರೊನ್ಹಾ ಬೆಳಿಗ್ಗೆ 10 ಗಂಟೆಯ ಬಲಿಪೂಜೆಯನ್ನು ಅರ್ಪಿಸಿದರು. ದಿನದ ಇತರ ಬಲಿಪೂಜೆಗಳನ್ನು ವಂದನೀಯ ಆಲ್ವಿನ್ ಸಿಕ್ವೇರಾ, ಕಟ್ಕೆರೆ; ವಂದನೀಯ ವೀರೇಶ್ ಮೋರಸ್, ಶಿವಮೊಗ್ಗ; ವಂದನೀಯ ತೋಮಸ್ ರೋಶನ್ ಡಿಸೋಜಾ, ಗಂಗೊಳ್ಳಿ; ವಂದನೀಯ ಆ್ಯಂಡ್ರು ಡಿಸೋಜಾ, ಬೋಂದೆಲ್ ಇವರು ನೆರವೇರಿಸಿದರು.

ವಂದನೀಯ ವಿಕ್ಟರ್ ಡಿಮೆಲ್ಲೊ, ಪಾನೀರ್ ಇವರು ನೆರವೇರಿಸಿದ ದಿನದ ಅಂತಿಮ ಬಲಿಪೂಜೆಯೊಡನೆ ಮಹೋತ್ಸವದ ಮೂರನೇ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು.

ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಮತ್ತು  ವಿನಯ್ ಕುಮಾರ್ ಸೊರಕೆಯವರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸರ ಅನುಗ್ರಹವನ್ನು ಪಡೆದರು.

ಮಹೋತ್ಸವದ ನಾಲ್ಕನೇ ದಿನ ಬುಧವಾರ ಬೆಳಿಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಮಧ್ಯಾಹ್ನ 12 ಗಂಟೆಯ ಬಲಿಪೂಜೆ ಕನ್ನಡ ಭಾಷೆಯಲಿದ್ದು, 10 ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಡೊ| ಅಲೋಶಿಯಸ್ ಪಾವ್ಲ್ ಡಿಸೋಜಾರವರು ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ.


Spread the love

Leave a Reply

Please enter your comment!
Please enter your name here