ಕಸದಿಂದ ಮುಕ್ತಿಕಂಡ ಬಂಡೀಪುರ-ಕಬಿನಿ ಹಿನ್ನೀರು!

Spread the love

ಕಸದಿಂದ ಮುಕ್ತಿಕಂಡ ಬಂಡೀಪುರ-ಕಬಿನಿ ಹಿನ್ನೀರು!

ಮೈಸೂರು: ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಗುಂಡ್ರೆ ವನ್ಯಜೀವಿ ವಲಯದ ಕಬಿನಿ ಹಿನ್ನೀರಿನ ಪ್ರದೇಶವು ನಿಸರ್ಗ ಸುಂದರ ರಮಣೀಯ ಪ್ರದೇಶವಾಗಿದ್ದು, ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ತಂದು ಎಸೆಯು ಪ್ಲಾಸ್ಟಿಕ್ ಸಹಿತದ ಕಸಗಳು ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ.

ಸದ್ಯ ಕಬಿನಿ ಹಿನ್ನೀರು ಮತ್ತು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿ ಕಸಗಳಿಗೆ ಮುಕ್ತಿ ನೀಡಲಾಗಿದ್ದು, ಇದರಿಂದ ನಿಸರ್ಗ ಸೌಂದರ್ಯ ಇಮ್ಮಡಿಯಾಗಿದೆ. ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ಅರಣ್ಯ ಸಿಬ್ಬಂದಿಗಳೊಂದಿಗೆ, ನಮ್ಮ ಮೈಸೂರು ಫೌಂಡೇಶನ್, ಫ್ರೆಂಡ್ಸ್ ಆಫ್ ವೈಲ್ಡ್ ಲೈಫ್ ಹಾಗೂ ಇವಾಲ್ವ್ ಬ್ಯಾಂಕ್ ರೆಸಾರ್ಟ್ಸ್ ಅವರ ಸಹಯೋಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಸ್ವಯಂ ಸೇವಕರು “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಘೋಷ ವಾಕ್ಯದೊಂದಿಗೆ ಹಿನ್ನೀರಿನಲ್ಲಿದ್ದ ಕಸಗಳನ್ನೆಲ್ಲ ತೆಗೆದು ಸ್ವಚ್ಛಗೊಳಿಸಿ ಗಮನಸೆಳೆಯಲಾಗಿದೆ.

ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಹಿನ್ನೀರಿನಲ್ಲಿ ಸ್ವಚ್ಛಗೊಳಿಸಲು ಅನುಕೂಲವಾಗಿದ್ದು, ಸುಮಾರು ನಲವತ್ತು ರಿಂದ ಐವತ್ತು ಟನ್ ಗಳಷ್ಟು ಕಸವನ್ನು ಐನೂರು ಬ್ಯಾಗ್ ಗಳಲ್ಲಿ ಸಂಗ್ರಹಿಸಲಾಗಿದೆ. ಇಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಸವಿತ್ತು ಎನ್ನುವುದಾದರೆ ಇಲ್ಲಿಗೆ ಬರುವ ಪ್ರವಾಸಿಗರು ಯಾವ ಮಟ್ಟಿಗೆ ತ್ಯಾಜ್ಯ ವಸ್ತುಗಳನ್ನು ಎಸೆಯಬಹುದು ಎಂಬದು ನಮಗೆ ಅರಿವಾಗುತ್ತದೆ. ಜತೆಗೆ ನದಿಗೆ ಎಸೆದ ವಸ್ತುಗಳು ಕೂಡ ಇಲ್ಲಿ ಸಂಗ್ರಹವಾಗಿದ್ದು ಅದನ್ನು ಕೂಡ ಹೊರ ತೆಗೆದು ಸ್ವಚ್ಛಗೊಳಿಸಲಾಗಿದೆ. ಇಷ್ಟೇ ಅಲ್ಲದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಬ್ಬಂದಿಗಳು ಎರಡು ವಾಹನಗಳನ್ನು ನಿಯೋಜಿಸಿ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ಒಟ್ಟಾರೆ ಕಬಿನಿ ಹಿನ್ನೀರಿನ ಪ್ರದೇಶ ಮತ್ತು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯ ಆಸುಪಾಸುಗಳಲ್ಲಿ ಎಸೆಯಲಾಗಿದ್ದ ಕಸ ಮತ್ತು ತ್ಯಾಜ್ಯಗಳನ್ನೆಲ್ಲ ತೆಗೆಯಲಾಗಿದ್ದು ಬಂಡೀಪುರ ಉದ್ಯಾನವನ್ನು “ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಪ್ರದೇಶವನ್ನಾಗಿ ಮಾಡಲಾಗಿದೆ” ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರು ಹುಲಿಯೋಜನೆ ಬಂಡೀಪುರ ಅಧಿಕಾರಿಯಾದ ಎಸ್.ಆರ್.ನಟೇಶ್ ಅವರ ನೇತೃತ್ವದಲ್ಲಿ ಉತ್ತಮ ಕೆಲಸವಾಗಿದ್ದು, ಹೆಡಿಯಾಲ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಆರ್ .ರವಿಕುಮಾರ್ ಗುಂಡ್ರೆ ವನ್ಯಜೀವಿ ವಲಯ ವಲಯ ಅರಣ್ಯಾಧಿಕಾರಿ ವಿ.ಶಶಿಧರ್ ಮತ್ತು ಎನ್.ಬೇಗೂರು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರ ಶ್ಲಾಘನೀಯವಾಗಿದೆ.


Spread the love