ಕಾಂಗ್ರೆಸಿನ ಬಸ್ಸಿಗೆ ಸಿದ್ದರಾಮಯ್ಯ ಡ್ರೈವರ್‌, ಡಿ.ಕೆ. ಶಿವಕುಮಾರ್ ಕಂಡಕ್ಟರ್‌! ಬೊಮ್ಮಾಯಿ ವ್ಯಂಗ್ಯ

Spread the love

ಕಾಂಗ್ರೆಸಿನ ಬಸ್ಸಿಗೆ ಸಿದ್ದರಾಮಯ್ಯ ಡ್ರೈವರ್‌, ಡಿ.ಕೆ. ಶಿವಕುಮಾರ್ ಕಂಡಕ್ಟರ್‌! ಬೊಮ್ಮಾಯಿ ವ್ಯಂಗ್ಯ

ಹಾವೇರಿ: ‘ನಾಲ್ಕು ಚಕ್ರ ಪಂಕ್ಚರ್ ಆಗಿರುವ ಬಸ್ಗೆ ಸಿದ್ದರಾಮಯ್ಯ ಅವರು ಡ್ರೈವರ್ ಮತ್ತು ಡಿ.ಕೆ. ಶಿವಕುಮಾರ್ ಕಂಡಕ್ಟರ್ ಆಗಿದ್ದಾರೆ. ಈ ಬಸ್ ನಿಂತಲ್ಲೆ ನಿಂತಿರುತ್ತದೆಯೇ ಹೊರತು ಮುಂದಕ್ಕೆ ಚಲಿಸುವುದಿಲ್ಲ. ಏಕೆಂದರೆ ಇಬ್ಬರ ನಡುವೆ ತಾಳಮೇಳ ಸರಿಯಿಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಹಾವೇರಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸೇವಕ ಸಮಾವೇಶದಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಶ್ರೀಮಂತರ ಪರ, ಸೋತಾಗ ಜನಸಾಮಾನ್ಯರ ಪರ ಮಾತನಾಡುತ್ತಾರೆ. ಈ ದ್ವಂದ್ವ ನೀತಿಯಿಂದ ಜನರು ಅವರನ್ನು ವಿರೋಧಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ’ ಎಂದು ಟೀಕಿಸಿದರು.

ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ‘ಸುವರ್ಣ ಗ್ರಾಮೋದಯ ಯೋಜನೆ’ಯನ್ನು ಮತ್ತೆ ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ. ‘ಐದು ಕಾಯ್ದೆಗಳು ಅಸಂಖ್ಯಾತ ಸುಳ್ಳುಗಳು’ ಎಂಬ ಕಿರುಹೊತ್ತಿಗೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೃಷಿ ಕಾಯ್ದೆಗಳು ಅನ್ನದಾತರ ಪರವಾಗಿವೆ’ ಎಂದು ತಿದ್ದುಪಡಿಯನ್ನು ಸಮರ್ಥಿಸಿಕೊಂಡರು.


Spread the love