
ಕಾಂಗ್ರೆಸ್ಗೆ ಮತ ಹಾಕಿದರೆ ಮೀಸಲಾತಿಗೆ ಧಕ್ಕೆ – ಜೆ ಪಿ ನಡ್ಡಾ
ಕುಂದಾಪುರ: ಎಲ್ಲ ಸಮುದಾಯಗಳಿಗೆ ಬಿಜೆಪಿ ಮೀಸಲಾತಿ ನೀಡಿದೆ. ಅಧಿಕಾರಕ್ಕೆ ಬಂದರೆ ಬಿಜೆಪಿ ಘೋಷಿಸಿರುವ ಮೀಸಲಾತಿಯನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ಗೆ ಮತ ಹಾಕಿದರೆ ಮೀಸಲಾತಿಗೆ ಧಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.
ಅವರು ಭಾನುವಾರ ಸಾಲಿಗ್ರಾಮದಲ್ಲಿ ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಪರ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಸಿಗಬೇಕೆಂಬುದು ನಮ್ಮ ಉದ್ದೇಶ. ಮೀಸಲಾತಿ ವಿರೋಧಿ ಕಾಂಗ್ರೆಸ್‌ಗೆ ಅಧಿಕಾರ ನೀಡಬೇಕಾ ಎಂದು ಜನರು ತೀರ್ಮಾನಿಸಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅರ್ಕಾವತಿ ಹಗರಣ, ಪಿಎಸೈ ನೇಮಕಾತಿ ಹಗರಣ, ಶಿಕ್ಷಕರ ನೇಮಕಾತಿ ಹಗರಣ ಸಹಿತ ಅನೇಕ ಹಗರಣಗಳು ಸಿದ್ದರಾಮಯ್ಯರ ಸರ್ಕಾರ ಇದ್ದಾಗ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರವಲ್ಲ, ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಕೂಡಾ ಜಾಮೀನಿನಲ್ಲಿ ಹೊರಗಿದ್ದಾರೆ. ಮೇಲಿಂದ ಕೆಳಗಿನವರೆಗೆ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹವರು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಗೆ ಮತ ನೀಡುವ ಮೂಲಕ ಕಾಂಗ್ರೆಸಿಗರನ್ನು ಮನೆಗೆ ಕಳುಹಿಸಿ ಎಂದು ಮನವಿ ಮಾಡಿದರು.
ಜಾಗತಿಕ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ 5ನೇ ಸ್ಥಾನಕ್ಕೇರಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ರೂ 1 ಲಕ್ಷ ಕೋಟಿ ನೀಡಿದೆ. ದೇಶದಲ್ಲೇ ಅತಿದೊಡ್ಡ ಕೈಗಾರಿಕಾ ಕಾರಿಡಾರ್ ತುಮಕೂರಿನಲ್ಲಿ ನಿರ್ಮಿಸಲಾಗುತ್ತಿದೆ. ಹೆಲಿಕಾಪ್ಟರ್ಗಳು ಇಲ್ಲೇ ತಯಾರಾಗಲಿವೆ. ಬಡಜನರಿಗೆ ವರ್ಷಕ್ಕೆರೂ 5 ಲಕ್ಷದವರೆಗೆ ಆರೋಗ್ಯ ಸುರಕ್ಷೆ ನೀಡುವ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಲಾಗಿದೆ. ಎಲ್ಲ ರಂಗದಲ್ಲೂ ಕರ್ನಾಟಕ ನಂಬರ್ ವನ್ ಆಗಲು ಡಬಲ್ ಎಂಜಿನ್ ಸರ್ಕಾರ ಕಾರಣ ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಕಿಸಾನ್ ಸಮ್ಮಾನ್ ಯೋಜನೆಗಾಗಿ ರೈತರ ವಿವರ ನೀಡಿ ಎಂದು ಕೇಳಿದರೆ 17 ರೈತರ ವಿವರವನ್ನಷ್ಟೇ ನೀಡಿದ್ದರು. ಆ ಸರ್ಕಾರವನ್ನು ಕಿತ್ತು ಹಾಕಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಅವರು 54 ಲಕ್ಷ ರೈತರ ಪಟ್ಟಿ ನೀಡಿದರು. ಈಗ ಪ್ರತಿ ರೈತರ ಖಾತೆಗೆ ಹಣ ಹೋಗುತ್ತಿದೆ. ಡಬಲ್ ಎಂಜಿನ್ ಸರ್ಕಾರ ಇದ್ದರೆ ಏನು ಲಾಭ ಎಂಬುದಕ್ಕೆ ಇದು ಸಾಕ್ಷಿ ಎಂದು ವಿವರಿಸಿದರು.
ತಾನು ನಿವೃತ್ತಿ ಘೋಷಿಸಿ ಕಿರಣ್ ಕುಮಾರ್ ಕೊಡ್ಗಿಯವರಿಗೆ ಅವಕಾಶ ಕಲ್ಪಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಧನ್ಯವಾದ ಸಲ್ಲಿಸಿದ ಷಾ ಕಿರಣ್ ಕುಮಾರ್ ಕೊಡ್ಗಿ ಪಕ್ಷದಲ್ಲಿದ್ದು ಹಲವು ಸಮಯದಿಂದ ಜನಸೇವೆ ಮಾಡುತ್ತಿದ್ದಾರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬ್ಯಾಟನ್ ಅನ್ನು ಕಿರಣ್ ಅವರಿಗೆ ಹಸ್ತಾಂತರಿಸಿದ್ದು ಬಹುಮತದಿಂದ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸುವ ಜವಾಬ್ದಾರಿ ಮತದಾರರ ಮೇಲಿದೆ ಎಂದರು. ಅಭಿವೃದ್ಧಿ ಪರವಾಗಿ ಕುಂದಾಪುರದ ಜನರು ನಿಲ್ಲಬೇಕು. ಕಿರಣ್ ಕುಮಾರ್ ಕೊಡ್ಗಿಯವರನ್ನು ಗೆಲ್ಲಿಸಿ ಕಳುಹಿಸಿ ಎಂದು ಮನವಿ ಮಾಡಿದರು.
ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಬಿಜೆಪಿ ಕುಂದಾಪುರ ಉಸ್ತುವಾರಿ ಸುಪ್ರಸಾದ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕುಂದಾಪುರ ಬಿಜೆಪಿ ಅಧ್ಯಕ್ಷ ಹಾಗೂ ಇತರರು ಉಪಸ್ಥಿತರಿದ್ದರು.