
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತ : ಡಿ.ಕೆ. ಶಿವಕುಮಾರ
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.
ಪಟ್ಟಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಬೆಲೆ ಏರಿಕೆಯಿಂದ ತತ್ತರಿಸಿದ ಜನರ ಬಾಳಲ್ಲಿ ಮತ್ತೆ ಬೆಳಕು ತರಬೇಕಾಗಿದೆ. ನಿಮ್ಮ ಧ್ವನಿಯಾಗಿ ನಿಮಗೆ ಶಕ್ತಿ ನೀಡಲು ಇಲ್ಲಿಗೆ ಬಂದಿದ್ದೇವೆ’ ಎಂದರು.
‘ಬುದ್ಧ ಮನೆ ಬಿಟ್ಟ ಘಳಿಗೆ, ಬಸವಣ್ಣ ಆಸ್ಥಾನ ಬಿಟ್ಟ ಘಳಿಗೆ, ಏಸು ಶಿಲುಬೆಗೇರಿದ ಘಳಿಗೆ, ಭೀಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಘಳಿಗೆ, ಮಹಾತ್ಮ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಘಳಿಗೆ… ಇವೇ ನಮ್ಮ ಶುಭಘಳಿಗೆಗಳು. ಇಂಥ ಘಳಿಗೆಯಲ್ಲೇ ಯಾತ್ರೆ ಆರಂಭಿಸಿದ್ದೇವೆ’ ಎಂದರು.
‘ಅಡುಗೆ ಅನಿಲ ದರ ₹400 ರಿಂದ ₹1100 ಆಗಿದೆ. ರೈತರ ಆದಾಯ ಡಬಲ್ ಆಗಲಿಲ್ಲ, ರೈತರ ಸಾಲ ಮನ್ನಾ ಆಗಲಿಲ್ಲ, 10 ಗಂಟೆ ವಿದ್ಯುತ್ ನೀಡುವ ಭರವಸೆಯೂ ಈಡೇರಿಸಲಿಲ್ಲ. ಇವೆಲ್ಲ ಬಿಜೆಪಿ ಚುನಾವಣೆಗೂ ಮುನ್ನ ನೀಡಿದ ಸುಳ್ಳು ಭರವಸೆಗಳು’ ಎಂದರು.
‘ಹೊಟೇಲ್ನ ‘ಮೆನುಕಾರ್ಡ್’ ಮಾದರಿಯಲ್ಲಿ ಭ್ರಷ್ಟಾಚಾರದ ಬಿಜೆಪಿ ‘ರೇಟ್ಕಾರ್ಡ್’ ಮಾಡಿದೆ. ಮುಖ್ಯಮಂತ್ರಿ ಹುದ್ದೆಗೆ ₹2500 ಕೋಟಿ, ಮಂತ್ರಿ ಹುದ್ದೆಗೆ ₹100 ಕೋಟಿ, ಆಯುಕ್ತರಾಗಲು ₹15 ಕೋಟಿ, ಕಾಮಗಾರಿಗೆ ಶೇ 40, ಮಠಗಳ ಅನುದಾನದಲ್ಲಿ ಶೇ 40, ಮೊಟ್ಟೆ ಪೂರೈಕೆಯಲ್ಲಿ ಶೇ30 ಕಮಿಷನ್ ನಿಗದಿ ಮಾಡಿದ್ದಾರೆ. 2 ಲಕ್ಷ ಸದಸ್ಯರಿರುವ ಗುತ್ತಿಗೆದಾರರ ಸಂಘದವರೇ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ’ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನೀಡಿದ 165 ಭರವಸೆಗಳ ಪೈಕಿ 159 ಭರವಸೆ ಈಡೇರಿಸಿದ್ದೇವೆ ಎಂದೂ ಹೇಳಿದರು.