
ಕಾಂಗ್ರೆಸ್ ಜೆಡಿಎಸ್ ಪಕ್ಷಗಗಳು ಬಿಜೆಪಿಗೆ ಸಮಾನ ಶತ್ರುಗಳು
ಮೈಸೂರು: ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಸಾಹಿತಿ ಎಸ್.ಎಲ್.ಭೈರಪ್ಪನವರ ಭೇಟಿ ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಅಶ್ವಥ್ ನಾರಾಯಣ್, ಅವರು ಚುನಾವಣೆ ವಿಚಾರದಲ್ಲಿ ಬಿಜೆಪಿ ಯಾರೊಂದಿಗೂ, ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವುದೇ ಬಿಜೆಪಿಯ ಗುರಿ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ನಮಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾನ ಶತ್ರುಗಳು ಎಂದು ಟೀಕಿಸಿದರು
ರಾಜ್ಯ ಬಿಜೆಪಿಯಲ್ಲಿ ಸಮರ್ಥ ನಾಯಕರಿಲ್ಲದ ಕಾರಣ ಮೋದಿ, ಅಮಿತ್ ಷಾ ರನ್ನು ಪದೇ ಪದೇ ಕರೆ ತರುತ್ತಿದ್ದಾರೆಂಬ ಕಾಂಗ್ರೆಸ್ ನ ಹಿರಿಯ ನಾಯಕರ ಹೇಳಿಕೆಗೆ ಪ್ರತಿಕ್ರಿಸಿದ ಅಶ್ವಥ್ ನಾರಾಯಣ್, ನಮಗೆ ಮೋದಿ ಅಮಿತ್ ಷಾ ರಂತಹವರು ಇರುವುದರಿಂದಲೇ ಕರೆ ತರುತ್ತಿದ್ದೇವೆ. ಮೋದಿ, ಅಮಿತ್ ಶಾರನ್ನು ಸರಿಗಟ್ಟುವ ಸಮರ್ಥ ನಾಯಕರು ಕಾಂಗ್ರೆಸ್ ನಲ್ಲಿಲ್ಲ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೆ ಮಾಡಲು ಬೇರೆ ಕೆಲಸವಿಲ್ಲ. ಇಬ್ಬರೂ ಪುರುಷೊತ್ತಾಗಿ ಇದ್ದಾರೆ ಹಾಗಾಗಿ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ಧಾರೆ ಎಂದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿರುವ ವಿಚಾರವಾಗಿ ಮಾತನಾಡಿದ ಸಚಿವರು ವಿವಿಯಲ್ಲಿ ನಡೆದಿರುವ ಅಕ್ರಮದಲ್ಲಿ ನನ್ನದೇನು ಪಾತ್ರವಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ.ಭ್ರಷ್ಟರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್ ಅಶೋಕ್ ನೇಮಕಗೊಂಡ ಬೆನ್ನಲ್ಲೇ ಗೋ ಬ್ಯಾಕ್ ಅಶೋಕ್ ಪೋಸ್ಟರ್ ಅಭಿಯಾನ ವಿಚಾರದ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅಶ್ವಥ್ ನಾರಾಯಣ್ , ಇದು ನಮ್ಮ ಪಕ್ಷದವರ ಕೆಲಸವಲ್ಲ, ಇದು ವಿರೋಧ ಪಕ್ಷದವರ ಕೃತ್ಯವಾಗಿದೆ. ಗೋ ಬ್ಯಾಕ್ ಅಭಿಯಾನಕ್ಕೆ ವಿರೋಧ ಪಕ್ಷಗಳೇ ಕಾರಣ ಎಂದು ವಿಪಕ್ಷಗಳ ಮೇಲೆ ಬೊಟ್ಟು ಮಾಡಿದರು.