
ಕಾಂಗ್ರೆಸ್ ನವರು ಹೀಗೆ ಮಾತನಾಡಿಯೇ ಎಲ್ಲಾ ಕಡೆ ಅಧಿಕಾರ ಕಳೆದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ಪದೇಪದೇ ಆರ್ ಎಸ್ ಎಸ್ ವಿರುದ್ಧ ಟೀಕೆ ಮಾಡುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಆರ್ ಎಸ್ಎಸ್ ಚಡ್ಡಿಯನ್ನು ಸುಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಆರ್ ಎಸ್ಎಸ್ ಕಳೆದ 75 ವರ್ಷಗಳಿಂದ ದೇಶಸೇವೆ ಮಾಡಿಕೊಂಡು ಬಂದಿದೆ. ದೇಶಸೇವೆಗೆ, ರಾಷ್ಟ್ರನಿರ್ಮಾಣದಲ್ಲಿ ದೇಶಭಕ್ತಿಯನ್ನು ಜನರಲ್ಲಿ ಮೂಡಿಸುವ ಸಂಸ್ಥೆ ಆರ್ ಎಸ್ಎಸ್. ಬೇರೆ ಬೇರೆ ರಾಜ್ಯಗಳಲ್ಲಿ ಆರ್ ಎಸ್ ಎಸ್ ಉತ್ತಮ ಕೆಲಸ ಮಾಡಿಕೊಂಡು ಬಂದಿದೆ. ಆದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರು ರಾಜಕೀಯ ಲಾಭಕ್ಕಾಗಿ ಆರ್ ಎಸ್ ಎಸ್ ಬಗ್ಗೆ ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಜನತೆಗೆ ಆರ್ ಎಸ್ ಎಸ್ ಎಂದರೆ ಏನು ಎಂದು ಗೊತ್ತಿದೆ. ಕಾಂಗ್ರೆಸ್ ನವರು ಹೀಗೆ ಮಾತನಾಡುತ್ತಾ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಕೂಡ ಕಳೆದುಕೊಳ್ಳುತ್ತಾರೆ. ಆರ್ ಎಸ್ ಎಸ್ ವಿರುದ್ಧ ಕಾಂಗ್ರೆಸ್ ನವರು ಹೀಗೆ ಮಾತನಾಡುತ್ತಾ ಹೋದರೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇಂದು ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಸೋತರೂ ಕೂಡ ಪಾಠ ಕಲಿತಿಲ್ಲ, ಆರ್ ಎಸ್ ಎಸ್ ಬಗ್ಗೆ ಹೀಗೆ ಮಾತನಾಡುತ್ತಾ ಹೋದರೆ ಸರಿಯಾದ ಅನುಭವ ಅವರಿಗಾಗಲಿದೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಮಾತನಾಡಿದ ಸಿಎಂ, ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದಷ್ಟೇ ಹೇಳಿದರು. ಆ ಬಗ್ಗೆ ಹೆಚ್ಚಿನ ಹೇಳಿಕೆ ನೀಡಲಿಲ್ಲ.
ಆರ್ ಎಸ್ ಎಸ್ ಚಡ್ಡಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರಿಗೆ ಬುದ್ದಿ ಇಲ್ಲ, ಕಾಂಗ್ರೆಸ್ ನವರಿಗೆ ಬುದ್ಧಿ ಭ್ರಮಣೆಯಾಗಿದೆ. ಹೀಗೆ ಮಾತನಾಡಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಚಡ್ಡಿ ವಿಷಯಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ. ಚಡ್ಡಿ ವಿಷಯ ಅವರಿಗೆ ಗೊತ್ತಿಲ್ಲ ಎಂದರು.