
ಕಾಂಗ್ರೆಸ್ ನಿಂದ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಒತ್ತು: ವಿನಯಕುಮಾರ್ ಸೊರಕೆ
ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನತೆಯ ಆಶೀರ್ವಾದದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕರಾವಳಿ ಭಾಗದ ಅಭಿವೃದ್ಧಿಗಾಗಿ ಹತ್ತು ಅಂಶಗಳನ್ನೊಳಗೊಂಡ ‘ದಶ ಸಂಕಲ್ಪ’ ಯೋಜನೆಯನ್ನು ಜಾರಿಗೊಳಿಸುವುದಾಗಿ ಪಕ್ಷದ ಹಿರಿಯ ನಾಯಕರು ರವಿವಾರ ಮಂಗಳೂರಿನಲ್ಲಿ ಘೋಷಿಸಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದ್ದಾರೆ.
ಅವರು ಸೋಮವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರಾವಳಿ ಭಾಗದ ಅಭಿವೃದ್ಧಿಗೆ ಪಕ್ಷ ವಿಶೇಷ ಆದ್ಯತೆಯನ್ನು ನೀಡಲಿದ್ದು, ಈ ಭಾಗದಲ್ಲಿ ಉದ್ಯೋಗದ ಸೃಜನೆ, ಬಂಡವಾಳ ಹೂಡಿಕೆ, ಪ್ರವಾಸೋದ್ಯಮ ಹಾಗೂ ಸಾಮರಸ್ಯದ ವಾತಾವರಣ ಸೃಷ್ಟಿಸಲು ‘ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ ಎಂಬ ಶಾಸನಬದ್ಧ ಸಂಸ್ಥೆಯೊಂದನ್ನು ಸ್ಥಾಪಿಸಿ ಅದಕ್ಕೆ ಪ್ರತಿ ವರ್ಷದ ಬಜೆಟ್ನಲ್ಲಿ 2,500 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ದಶ ಸಂಕಲ್ಪದಲ್ಲಿ ಭರವಸೆ ನೀಡಲಾಗಿದೆ ಎಂದರು.
ಮಂಗಳೂರನ್ನು ಭಾರತದ ಮುಂದಿನ ಐಟಿ ಹಾಗೂ ಗಾರ್ಮೆಂಟ್ ಉದ್ಯಮಗಳ ಹಬ್ ಆಗಿ ಅಭಿವೃದ್ಧಿ ಪಡಿಸಿ, ಕರಾವಳಿ ಭಾಗದಲ್ಲಿ ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ. ಕರಾವಳಿ ಭಾಗದ ಪ್ರಮುಖ ಸಮುದಾಯವಾಗಿರುವ ಮೊಗವೀರ ಸಮಾಜಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ ಎಂದು ಸೊರಕೆ ತಿಳಿಸಿದರು.
ಮೀನುಗಾರ ಮಹಿಳೆಯರಿಗೆ ಒಂದು ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ, ಮೊಗವೀರರಿಗೆ ತಲಾ 10 ಲಕ್ಷ ರೂ.ವಿಮಾ ಯೋಜನೆ, ಅತ್ಯಾಧುನಿಕ ಮೀನುಗಾರಿಕಾ ದೋಣಿಯ ಖರೀದಿಗೆ 25 ಲಕ್ಷ ರೂ.ವರೆಗಿನ ಸಬ್ಸಿಡಿ, ಡೀಸೆಲ್ ಮೇಲಿನ ಸಬ್ಸಿಡಿಯನ್ನು ಲೀ.10.71ರಿಂದ 25ರೂ.ಗೆ ಹೆಚ್ಚಳ, ಹಾಗೂ ಡೀಸೆಲ್ ಪ್ರಮಾಣವನ್ನು 300ರಿಂದ 500ಲೀ.ಗೆ ಏರಿಕೆ ಮಾಡಲಾಗುವುದು ಎಂದರು.
ತೀವ್ರವಾಗಿ ಹದಗೆಟ್ಟಿರುವ ಕೋಮು ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಪುನರ್ ಸ್ಥಾಪಿಸಲು ಪ್ರತಿ ಗ್ರಾಮಪಂಚಾಯತ್ ಮಟ್ಟದಲ್ಲಿ ‘ಸ್ವಾಮೀ ವಿವೇಕಾನಂದ ಕೋಮು ಸೌಹಾರ್ದ ಮತ್ತು ಸಾಮಾಜಿಕ ಸಾಮರಸ್ಯ ಸಮಿತಿ’ಯನ್ನು ಸೂಕ್ತ ಯೋಜನೆ ಹಾಗೂ ಅನುದಾನದೊಂದಿಗೆ ಸ್ಥಾಪಿಸುವುದು ಇದರಲ್ಲಿ ಸೇರಿದೆ ಎಂದವರು ತಿಳಿಸಿದರು.
ಅದೇ ರೀತಿ ಮಲ್ಪೆ, ಗಂಗೊಳ್ಳಿ ಹಾಗೂ ಮಂಗಳೂರು ಮೀನುಗಾರಿಕಾ ಬಂದರಿನ ಹೂಳೆತ್ತುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು. ಬಿಲ್ಲವರಿಗಾಗಿ ಶ್ರೀನಾರಾಯಣಗುರು ಅಭಿವೃದ್ಧಿ ಮಂಡಳಿ ರಚಿಸಿ ಅದಕ್ಕೆ ವಾರ್ಷಿಕ 250ರಂತೆ ಐದು ವರ್ಷಗಳಲ್ಲಿ 1250 ಕೋಟಿ ರೂ.ಅನುದಾನ ಬಿಡುಗಡೆ. ಅದೇ ರೀತಿ ಬಂಟ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಅದಕ್ಕೂ ವಾರ್ಷಿಕ 250 ಕೋಟಿ ರೂ.ಅನುದಾನ ಬಿಡುಗಡೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ನೀಡುವ ಅನುದಾನದ ಮೊತ್ತವನ್ನು ಹೆಚ್ಚಿಸುವುದು ಹಾಗೂ ಮೋದಿ ಸರಕಾರ ನಿಲ್ಲಿಸಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪುನರಾರಂಭಿಸುವುದು ಸೇರಿದಂತೆ ಒಟ್ಟು 10 ಯೋಜನೆಗಳನ್ನು ಕರಾವಳಿ ಪ್ರದೇಶವನ್ನು ದೃಷ್ಟಿಯಲ್ಲಿಟ್ಟು ಪ್ರಕಟಿಸಲಾಗಿದೆ ಎಂದು ಸೊರಕೆ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ಕುಮಾರ್ ಕೊಡವೂರು, ವಕ್ತಾರರಾದ ಭಾಸ್ಕರ ರಾವ್ ಕಿದಿಯೂರು, ರಮೇಶ್ ಕಾಂಚನ್, ಪದಾಧಿಕಾರಿಗಳಾದ ಪ್ರಖ್ಯಾತ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.