ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿಗಳಿಗೆ ಮರುಳಾಗದಿರಿ – ಯಶ್ಪಾಲ್ ಸುವರ್ಣ

Spread the love

ಕಾಂಗ್ರೆಸ್ ನ ಸುಳ್ಳು ಗ್ಯಾರಂಟಿಗಳಿಗೆ ಮರುಳಾಗದಿರಿ – ಯಶ್ಪಾಲ್ ಸುವರ್ಣ

ಉಡುಪಿ: ಮತ ಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷದವರು ಕಳೆದ 65 ವರ್ಷಗಳಿಂದ ಸುಳ್ಳು ಭರವಸೆಗಳ ಮೂಲಕ ಜನರನ್ನು ಮರಳು ಮಾಡಿಕೊಂಡು ಬಂದಿದ್ದು ಈ ಬಾರಿ ಗ್ಯಾರಂಟಿ ಕಾರ್ಡ್ ಎಂಬ ಮತ್ತೊಂದು ಸುಳ್ಳು ಭರವಸೆಯೊಂದಿಗೆ ಬಂದಿದೆ. ಆದರೆ ಗ್ಯಾರಂಟಿ ಕಾರ್ಡ್ ಹಂಚುವವರಿಗೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಹೇಳಿದರು.

ಅವರು ಭಾನುವಾರ ಕೊಕ್ಕರ್ಣೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿಯಾಗಿ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಒರ್ವ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಇಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗುವ ಭಾಗ್ಯ ಒದಗಿ ಬಂದಿದ್ದು, ಈ ಬಾರಿ ಬಿಜೆಪಿ ಪಕ್ಷವನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುವುದರ ಮೂಲಕ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಕೆಲಸ ಮಾಡಬೇಕಾಗಿದೆ. ಪ್ರಧಾನಿ ಮೋದಿಯವರು ದೇಶದ ನಾಯಕತ್ವ ವಹಿಸಿದ ಬಳಿಕ ದಿನದ 18 ಗಂಟೆ ಕೆಲಸ ಮಾಡುತ್ತಿದ್ದು ಪ್ರತಿಕ್ಷಣವೂ ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಇದರ ಫಲವಾಗಿ ಇಂದು ಭಾರತ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ ಎಂದರು.

ಉಡುಪಿ ಕ್ಷೇತ್ರದಲ್ಲಿ ಶಾಸಕ ರಘುಪತಿ ಭಟ್ ಅವರು ಸುಮಾರು 3000 ರೂ ಕೋಟಿ ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದಾರೆ. ಅವರ ಕೆಲಸವನ್ನು ಮುಂದುವರೆಸುವ ಜವಾಬ್ದಾರಿ ನನ್ನ ಮೇಲಿದ್ದು, ಮುಂದಿನ ಕೆಲವೇ ದಿನಗಳಿದ್ದು ಪ್ರತಿ ಬೂತ್ ನ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂಬ ನಿಟ್ಟಿನಲ್ಲಿ ಕೆಲಸ ಮಾಡುವುದರೊಂದಿಗೆ ತನ್ನ ಗೆಲುವಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಮುಂದಿನ ಐದು ವರ್ಷಗಳ ಕಾಲ ಕ್ಷೇತ್ರದ ಜನತೆಯ ಜನಸೇವಕನಾಗಿ ಕೆಲಸ ಮಾಡಲು ಬದ್ದನಾಗಿರುವೆ ಎಂದರು.

ಸಭೆಯಲ್ಲಿ ಶಾಸಕರಾದ ಕೆ. ರಘುಪತಿ ಭಟ್ ಅವರು ಭಾಗವಹಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವುದರ ಜೊತೆಗೆ ಕಳೆದ 5 ವರ್ಷಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ ಪಾಲ್ ಸುವರ್ಣ ಅವರಿಗೆ ಮತ ನೀಡಿ ಅತ್ಯಂತ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ವಿನಂತಿಸಿದರು.

ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾಳಜಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಹರ್ಷ ಕುಮಾರ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರತ್ನಾಕರ ಶೆಟ್ಟಿ, ನಿತಿನ್ ಜೋಗಿ, ರಾಜಾ ಸೇರಿಗಾರ್, ಮೊಹನ್ ದಾಸ್ ಶೆಟ್ಟಿ, ಸುರೇಶ್, ಮಣಿಕಂಠ, ಸೋಮನಾಥ, ಕಾರ್ತಿಕ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಶಾಸಕರಾದ ಕೆ. ರಘುಪತಿ ಭಟ್ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ ಪಾಲ್ ಸುವರ್ಣ ಅವರು ಪಕ್ಷದ ಧ್ವಜವನ್ನು ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ, ರಾಜ್ಯ ಬಿಜೆಪಿ ಎಸ್. ಟಿ ಮೋರ್ಚಾದ ಕಾರ್ಯದರ್ಶಿಗಳಾದ ಉಮೇಶ್ ನಾಯ್ಕ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಬಿ.ಎನ್ ಶಂಕರ್ ಪೂಜಾರಿ, ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾದ ಗಣೇಶ್ ಮೊಗೆಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ, ಪಕ್ಷದ ಮುಖಂಡರಾದ ಬಿರ್ತಿ ರಾಜೇಶ್ ಶೆಟ್ಟಿ, ಧನಂಜಯ ಅಮೀನ್, ಹರಿಮಕ್ಕಿ ರತ್ನಾಕರ ಶೆಟ್ಟಿ, ಚೇರ್ಕಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮನೋಜ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


Spread the love