ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯುವಕರಿಗೆ ಉದ್ಯೋಗ ಸೃಷ್ಠಿ – ಪ್ರಸಾದ್ ರಾಜ್ ಕಾಂಚನ್

Spread the love

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯುವಕರಿಗೆ ಉದ್ಯೋಗ ಸೃಷ್ಠಿ – ಪ್ರಸಾದ್ ರಾಜ್ ಕಾಂಚನ್

ಉಡುಪಿ: ಜಿಲ್ಲೆಯಲ್ಲಿ 27ಸಾವಿರಕ್ಕಿಂತಲೂ ಹೆಚ್ಚು ಯುವಕ ಯುವತಿಯರು ಪ್ರತಿ ವರ್ಷ ಪದವಿ ಮುಗಿಸಿ ಹೊರಬರುತ್ತಿದ್ದಾರೆ. ಆದರೆ ಬಿ.ಜೆ.ಪಿ ಸರ್ಕಾರ ಯುವ ಜನಾಂಗಕ್ಕೆ ಯಾವುದೇ ಉದ್ಯೋಗದ ಅವಕಾಶ ನೀಡಿಲ್ಲ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಆರೋಪಿಸಿದರು.

ಬ್ರಹ್ಮಾವರದಲ್ಲಿ ಶನಿವಾರ ಬೈಕ್ ರ್ಯಾಲಿಯ ಸಮಾಪನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪದವಿ ಮುಗಿಸಿ ಹೊರಬರುವು ಯುವ ಜನಾಂಗಕ್ಕೆ ಉದ್ಯೋಗ ನೀಡಲು ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ 20ಸಾವಿರ ಉದ್ಯೋಗವನ್ನು ಸೃಷ್ಟಿ ಮಾಡುತ್ತದೆ ಎಂದರು.

ಮೀನುಗಾರರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸುವ ಭರವಸೆ ನೀಡಿದ ಅವರು ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ತಯಾರಿಸಿ ಇಡೀ ಕರಾವಳಿ ಪ್ರದೇಶದ ಜನರನ್ನು ಒಳ್ಳೆಯ ರೀತಿಯಲ್ಲಿ ಜೀವನ ನಡೆಸಲು ಕಾಂಗ್ರೆಸ್ ಪಕ್ಷ ಬದ್ಧವಾಗಲಿದೆ. ಉದ್ದಿಮೆಗೆ ಅವಕಾಶ ಕರಾವಳಿ ಜಿಲ್ಲೆಯಲ್ಲಿ ಇದ್ದರೂ ಯುವಜನತೆಗೆ ಉದ್ಯೋಗ ಇಲ್ಲ. ಕಾಂಗ್ರೆಸ್ ಪಕ್ಷ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲಿರುವುದರಿಂದ ಯುವ ಜನತೆ ಕಾಂಗ್ರೆಸ್ಗೆ ಮತ ನೀಡುವಂತೆ ವಿನಂತಿಸಿದರು.

ಕಾಂಗ್ರೆಸ್ ಮುಖಂಡ ಸುಧೀರ ಕುಮಾರ್ ಮರೋಳಿ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂರ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಡಾ.ಸುನೀತಾ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾರಾಡಿ, ಅಮೃತ್ ಶೆಣೈ ಮತ್ತಿತರರು ಇದ್ದರು.


Spread the love