
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧ ಪ್ರಸ್ತಾಪ – ಸಚಿವ ಸುನೀಲ್ ಕುಮಾರ್ ಆಕ್ರೋಶ
ಉಡುಪಿ: ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರಕ್ಕೆ ರಾಜ್ಯ ಇಂಧನ ಸಚಿವ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುನೀಲ್ ಕುಮಾರ್ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಒಂದೇ ನಾಣ್ಯದ ಎರಡು ಮುಖ. ಭಜರಂಗದಳ ನಿಷೇಧಿಸುವುದು ಸೇರಿದಂತೆ ಕಾನೂನು ಕ್ರಮ ತೆಗೆದುಕೊಳ್ಳುವ ವಿಚಾರ ಕಾಂಗ್ರೆಸ್ ಪ್ರಸ್ತಾಪಿಸಿದೆ. ಡಿಕೆಶಿ, ಸಿದ್ದರಾಮಯ್ಯನವರೇ, ನಾವು ಪಿಎಫ್ ಐ ನಿಷೇಧ ಮಾಡಿದ್ದೇವೆ ಅದೇ ಸಂಕಟ ಹಾಗೂ ದ್ವೇಷವನ್ನು ಭಜರಂಗದಳ ನಿಷೇಧದ ಮೂಲಕ ತೀರಿಸಿಕೊಳ್ಳಲು ಹೊರಟಿದ್ದೀರಾ ? ನಿಮ್ಮ ಹಿಂದು ವಿರೋಧಿ ನಿಲುವಿಗೆ ಧಿಕ್ಕಾರ ಎಂದಿದ್ದಾರೆ.
ಭಜರಂಗದಳ ಎನ್ನುವುದು ಸಮಾಜ ವಿರೋಧಿ ಸಂಘಟನೆಯಲ್ಲ. ಹಿಂದೂಗಳ ರಕ್ಷಣೆಗೆ, ಗೋಮಾತೆಯ ಹಿತಕ್ಕೆ, ಹಿಂದು ಸೋದರಿಯರ ಮಾನ ಸಂರಕ್ಷಣೆಗೆ ಸಿದ್ದವಾಗಿರುವ ಕಾರ್ಯಕರ್ತರ ಪಡೆ ಮುಸ್ಲಿಂ ಓಲೈಕೆಗಾಗಿ ಭಜರಂಗದಳ ನಿಷೇಧಿಸುತ್ತೇವೆಂಬ ದಾಷ್ಟ್ಯವೇ ? ಭಜರಂಗ ದಳ ಹಾಗೂ ಪಿಎಫ್ ಐನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡುವ ಕಾಂಗ್ರೆಸಿಗರ ಮನಸು ರೋಗಗ್ರಸ್ಥವಾಗಿದೆ. ಪಿಎಫ್ಐ ಒಂದು ಭಯೋತ್ಪಾದಕ ಸಂಘಟನೆ ಎಂಬ ಕಾರಣಕ್ಕೆ ನಿಷೇಧ ಮಾಡಿದ್ದೇವೆ ಭಜರಂಗದಳ ಹಿಂದು ಸಮಾಜ ಮತ್ತು ದೇಶ ಹಿತದ ಸಂಘಟನೆ. ದೇಶಪ್ರೇಮವನ್ನು ಕಾಂಗ್ರೆಸ್ ನಿಷೇಧಿಸುತ್ತದೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.