
ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅಮಿತ್ ಶಾ
ಚಾಮರಾಜನಗರ: ತಾವು ಅಧಿಕಾರಕ್ಕೆ ಬಂದರೇ ಮುಸ್ಲಿಂ ಮೀಸಲಾತಿಯನ್ನು ಮತ್ತೇ ಜಾರಿ ಮಾಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದು, ಅವರು ಹೇಗೆ ಮಾಡುತ್ತಾರೆ, ಯಾವ ಜಾತಿ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಾರೆ-ಲಿಂಗಾಯತರದ್ದೋ, ಒಕ್ಕಲಿಗರದ್ದೋ ಇಲ್ಲವೇ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿಮೆ ಮಾಡಿ ಮುಸ್ಲಿಂರಿಗೆ ಕೊಡುತ್ತಾರೋ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಸ್ ನಿರಂಜನ್ ಕುಮಾರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದ್ದು ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಲಿದೆ. ಗುಂಡ್ಲುಪೇಟೆ ಅಭ್ಯರ್ಥಿ ನಿರಂಜನಕುಮಾರ್ ಅವರನ್ನು ಪ್ರಚಂಡ ಬಹುಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಶೇ 4 ರಷ್ಟು ಮೀಸಲಾತಿಯನ್ನು ಬಿಜೆಪಿ ಸರ್ಕಾರ ತೆಗೆದು ಹಾಕಿದೆ. ಕಾಂಗ್ರೆಸ್ ನವರು ತುಷ್ಟೀಕರಣದ ರಾಜಕೀಯ ಮಾಡಿದರೆ, ಮೋದಿಯವರು ವಿಕಾಸದ ರಾಜಕಾರಣ ಮಾಡುತ್ತಿದ್ದಾರೆ ಎಂದರು. ನಾವು ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಿದ್ದಾಗಿ ಹೇಳಿದರು.
ಕಾಂಗ್ರೆಸ್ ನವರು ಹೇಗೆ ವಾಪಸ್ ಮೀಸಲಾತಿ ನೀಡುತ್ತಾರೆ? ಲಿಂಗಾಯತರ ಮೀಸಲಾತಿ ಕಡಿಮೆ ಮಾಡುತ್ತಾರೋ, ಒಕ್ಕಲಿಗರ, ಎಸ್ ಸಿ ಎಸ್ ಟಿ ಮೀಸಲಾತಿ ಕಡಿಮೆ ಮಾಡುತ್ತಾರೆಯೇ? ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ’ ಎಂದು ಕಿಡಿಕಾರಿದರು.
ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ, ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.