ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ಕಾಂಗ್ರೆಸಿಕರಣ ಮಾಡಿ ಪರಿಷತ್ ನಲ್ಲಿ ಗೊಂದಲ ಸೃಷ್ಟಿಸಿದೆ – ಸಚಿವ ಕೋಟ

Spread the love

ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ಕಾಂಗ್ರೆಸಿಕರಣ ಮಾಡಿ ಪರಿಷತ್ ನಲ್ಲಿ ಗೊಂದಲ ಸೃಷ್ಟಿಸಿದೆ – ಸಚಿವ ಕೋಟ

ಉಡುಪಿ: ಕಾಂಗ್ರೆಸ್ ಪಕ್ಷ ಸಭಾಪತಿ ಸ್ಥಾನವನ್ನು ಕಾಂಗ್ರೇಸಿಕರಣ ಮಾಡಿ, ರಾಜಕಾರಣ ಮಾಡಿದ್ದು, ವಿಧಾನ ಪರಿಷತ್ ನಲ್ಲಿ ನಡೆದಿರುವ ಎಲ್ಲಾ ಗೊಂದಲಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಉಡುಪಿಯಲ್ಲಿ ಮಾಧ್ಯಮದವರೊಂದಗೆ ಮಾತನಾಡಿ ಈ ಹಿಂದೆ ಡಿಎಚ್ ಶಂಕರಮೂರ್ತಿ ಅವರು ಸಭಾಪತಿ ಆಗಿದ್ದ ಸಮಯದಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಶಂಕರಮೂರ್ತಿಯವರು ಉಪಸಭಾಪತಿ ಅವರಿಗೆ ಪೀಠ ಬಿಟ್ಟುಕೊಟ್ಟು ನಡಾವಳಿ ಅನುಸರಿಸಿದ್ದರು. ಅವಿಶ್ವಾಸ ಗೊತ್ತುವಳಿ ಬಿದ್ದು ಹೋದ ಬಳಿಕ ಮತ್ತೆ ಸಭಾಪತಿ ಪೀಠ ಅಲಂಕರಿಸಿದ್ದರು. ಆದರೆ ಈ ಬಾರಿ ಕಾನೂನನ್ನು ಸಂಪೂರ್ಣ ಗಾಳಿಗೆ ತೂರಿ ರಾಜಕೀಯ ಮಾಡಲಾಯಿತು. ಸಭಾಪತಿ ಅವರನ್ನು ನಿಯಂತ್ರಣ ಮಾಡಲು ಕಾಂಗ್ರೆಸ್ ಮುಂದಾಗದಿದ್ದರೆ ಗೊಂದಲ ಆಗುತ್ತಿರಲಿಲ್ಲ ಎಂದರು.

ರಾಜಧರ್ಮ ಪಾಲಿಸ ಬೇಕಾದ ಕಾಂಗ್ರೆಸ್ ಉಪ ಸಭಾಪತಿಯವರ ಕುತ್ತಿಗೆಗೆ ಕೈ ಹಾಕಿ ಗೊಂದಲ ಸೃಷ್ಟಿಸಿದ್ದು, ನಾವು ರಾಜ್ಯಪಾಲರ ಮೊರೆ ಹೋಗಿದ್ದೇವೆ, ಮತದಾನಕ್ಕೆ ಅವಕಾಶವನ್ನು ಕೋರಿದ್ದೇವೆ. ನೂತನ ಸಭಾಪತಿ ಯಾರು ಆಗಬೇಕು ಅಂತ ಪಕ್ಷ ತೀರ್ಮಾನಿಸುತ್ತದೆ ಎಂದರು.


Spread the love