
ಕಾಂಗ್ರೆಸ್ ಸರ್ಕಾರದ ಕೃಪಾ ಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿವೆ – ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ‘ಕಾಂಗ್ರೆಸ್ ಸರ್ಕಾರದ ಕೃಪಾ ಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಗಳು ನಡೆಯುತ್ತಿವೆ. ಎರಡೇ ತಿಂಗಳಲ್ಲಿ ಸರ್ಕಾರ ನೈತಿಕತೆ ಕಳೆದುಕೊಂಡಿದೆ’ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೈನ ಮುನಿಯ ಕೊಲೆಯಾಗಿದೆ, ಬೆಂಗಳೂರಿನಲ್ಲಿ ಹಾಡಹಗಲೆ ಟೆಕ್ಕಿ ಹತ್ಯೆಯಾಗಿದೆ.
ಉಲ್ಲಾಳದಲ್ಲಿ ಬಿಜೆಪಿ ಕಾರ್ಯಕರ್ತನ ಶವ ನೀರಿನಲ್ಲಿ ಸಿಗುತ್ತದೆ. ಹನುಮ ಜಯಂತಿ ಯಶಸ್ವಿಯಾಗಿಸಿದ್ದ ವೇಣುಗೋಪಾಲ್ ಕೊಲೆಯಾಗಿದೆ. ಇವೆಲ್ಲವನ್ನು ನೋಡಿದರೆ ರಾಜ್ಯದಲ್ಲಿ ಸರ್ಕಾರದ ಕೃಪೆಯಲ್ಲೆ ಕೊಲೆಗಳಾಗುತ್ತಿವೆ’ ಎಂದರು.
‘ಎಫ್‌ಐಆರ್‌ನಲ್ಲಿ ಎ-4 ಆರೋಪಿಯಾಗಿದ್ದವರನ್ನು ಎ-1 ಮಾಡಲಾಗುತ್ತದೆ. ಎ-1 ಇದ್ದವರನ್ನು ರಕ್ಷಣೆ ಮಾಡಲಾಗುತ್ತದೆ. ಇದು ಇಂದಿನ ಕಾಂಗ್ರೆಸ್ ಸರ್ಕಾರದ ರಾಜಕೀಯ ನೀತಿ. 136 ಸೀಟು ಗೆದ್ದಿದ್ದೇವೆ ಎಂದು ದರ್ಪದಿಂದ ಮಾತನಾಡುತ್ತಾರೆ. ಮುಂದೆ ಜನ ಪಾಠ ಕಲಿಸುತ್ತಾರೆ’ ಎಂದು ಶೋಭಾ ಕರಂದ್ಲಾಜೆ ಹೇಳಿದರು.
‘ನಿಮ್ಮ ಗ್ಯಾರಂಟಿಗಳು ಎಲ್ಲಿ ಹೋದವು, ಮೊದಲ ಸಂಪುಟದಲ್ಲೇ ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದಿದ್ದಿರಿ. ಮೊದಲ ಸಂಪುಟ ಸಭೆ ಯಾವಾಗ ನಡೆಯುತ್ತದೆ. ಮೊದಲು ಅದನ್ನು ಹೇಳಿ’ ಎಂದು ಪ್ರಶ್ನಿಸಿದರು