ಕಾಂಗ್ರೆಸ್ ಸುಳ್ಳು ಹೇಳಿ ಮೋಸದಿಂದ ಅಧಿಕಾರ ನಡೆಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Spread the love

ಕಾಂಗ್ರೆಸ್ ಸುಳ್ಳು ಹೇಳಿ ಮೋಸದಿಂದ ಅಧಿಕಾರ ನಡೆಸಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಯಾದಗಿರಿ(ಶಹಾಪುರ): ರಾಹುಲ್ ಗಾಂಧಿ, ಖರ್ಗೆ ಬರಲಿ ಯಾರೇ ಬರಲಿ ಬಿಜೆಪಿಯನ್ನು ತಡೆಯಲು ಆಗುವುದಿಲ್ಲ. ಕಾಂಗ್ರೆಸ್ ನವರು ಇಷ್ಟು ವರ್ಷ ಸುಳ್ಳು ಮೋಸಗಳಿಂದ ಅಧಿಕಾರ ನಡೆಸಿದ್ದಿರಿ. ಇನ್ನು ಮುಂದೆ ನಿಮ್ಮ ಆಟ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಶಹಾಪುರ ಬಿಜೆಪಿ ಅಭ್ಯರ್ಥಿ ಅಮಿನ್ ರೆಡ್ಡಿ ಪರವಾಗಿ ರೋಡ್ ಶೋ ನಡೆಸಿದ ಬಳಿಕ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದ ಮೇಲೆ ದೇಶ ಒಡೆದಿರಿ. ಈಗ ಸಮಾಜ ಒಡೆಯುವ ಕೆಲಸ ಮಾಡಿದ್ದೀರಿ‌. ಎಲ್ಲ ಸಮಾಜಗಳನ್ನು ಸಣ್ಣ ಸಣ್ಣ ಸಮಾಜಗಳಾಗಿ ಒಡೆದಿರಿ. ಎಸ್ಸಿ ಎಸ್ಟಿ ಸಮಾಜದವರ ಮೂವತ್ತು ವರ್ಷದಿಂದ ಮೀಸಲಾತಿ ಹೆಚ್ಚಳ ಮಾಡಲು ಮನವಿ ಮಾಡಿದ್ದರು. ಆದರೆ, ಕಾಂಗ್ರೆಸ್ ನವರು ಮಾಡಲಿಲ್ಲ. ಅವರಿಗೆ ಆಸೆ ತೋರಿಸುತ್ತ ಬಂದರು. ನಾನು ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ನಾನು ಹೆಚ್ಚಳ ಮಾಡಿದ್ದಕ್ಕೆ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಇದರಿಂದ ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಅದಕ್ಕಾಗಿ ಎಲ್ಲ ಲಿಂಗಾಯತ ಸಿಎಂ ಗಳು ಭ್ರಷ್ಟರು ಅಂತ ಹೇಳಿದ್ದಾರೆ ಎಂದರು.

ಎಲ್ಲ ಲಿಂಗಾಯತರು ಭ್ರಷ್ಟರು ಅಂದರೆ ಒಪ್ಪಲು ಸಾಧ್ಯವೆ ?
ಲಿಂಗಾಯತರು ಭಿಕ್ಷುಕರಲ್ಲ. ಅವರು ಅವರ ಹಕ್ಕು ಕೇಳಿದ್ದಾರೆ. ಅದನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ನವರು ಹೇಳಿದ್ದಾರೆ‌. ಅದನ್ನು ಮುಟ್ಟಿ ನೋಡಿ ಎಂದು ಸವಾಲ್ ಹಾಕಿದರು.

ಶಹಾಪೂರು ಪಕ್ಕದ ಸುರಪುರ ಕ್ಷೇತ್ರದಂತೆ ಅಭಿವೃದ್ಧಿ ಆಗಬೇಕೆಂದರೆ, ಅಮಿನ್ ರೆಡ್ಡಿಯನ್ನು ಗೆಲ್ಲಿಸಬೇಕು. ಅಮಿನ್ ರೆಡ್ಡಿ ಬಡವರ ಬಗ್ಗೆ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಬಡವರ ಪರವಾಗಿ ಕೆಲಸ ಮಾಡಲು ಒಂದು ನಿಮಿಷ ಸಮಯ ವ್ಯರ್ಥ ಮಾಡುವುದಿಲ್ಲ. ಕೋವಿಡ್ ಸಂದರ್ಬದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಮಿನ್ ರೆಡ್ಡಿ ಹಿಂದೆ ರಾಜು ಗೌಡ ಒಂದು ಶಕ್ತಿ ಇದೆ. ಡಬಲ್ ಎಂಜಿನ್ ಸರ್ಕಾರದ ಜೊತೆಗೆ ರಾಜುಗೌಡರ ಪವರ್ ತ್ರಿಬಲ್ ಪವರ್ ಇದೆ ಎಂದರು.

ಕಾಂಗ್ರೆಸ್ ಈಗ ಗ್ಯಾರೆಂಟಿ ಕೊಡುತ್ತಿದೆ. ಅದು ಮೇ 10 ರ ವರೆಗೆ ಮಾತ್ರ ಗ್ಯಾರೆಂಟಿ ಆ ಮೇಲೆ ಅದು ಗಳಗಂಟಿ. ರಾಜ್ಯದಲ್ಲಿ ಸುಭದ್ರ ಸರ್ಕಾರ ಬರಲು ಅಮಿನ್ ರೆಡ್ಡಿ ಅವರನ್ನು ಗೆಲ್ಲಿಸಿ. ನವ ಕರ್ನಾಟಕ ನಿರ್ಮಾಣ ಮಾಡಲು ಸಹಕರಿಸಿ ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದರು.


Spread the love