
ಕಾಂಗ್ರೆಸ್ 5ನೇ ಗ್ಯಾರಂಟಿ ಘೋಷಣೆ: ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ
ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಐದನೇ ಗ್ಯಾರಂಟಿಯನ್ನು ಗುರುವಾರ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೊದಲ ದಿನದಿಂದಲೇ ಮಹಿಳೆಯರಿಗೆ ಸರಕಾರಿ ಬಸ್ಸಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.
ಮಂಗಳೂರು ನಗರದ ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣ ಪ್ರಚಾರದ ಬಹಿರಂಗ ಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಭರವಸೆ ಈಡೇರಿಸುವುದಿಲ್ಲವೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ನಾವು ಭರವಸೆ ಈಡೇರಿಸುತ್ತೇವೆ, ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಭರವಸೆ ನಾವು ಈಡೇರಿಸುತ್ತೇವೆ. ಪ್ರಧಾನಿ ಮೋದಿ ಅವರೇ ಭರವಸೆಗಳನ್ನು ಈಡೇರಿಸಿಲ್ಲ. ಬಡವರು, ರೈತರು, ಯುವಕರಿಗೆ ನೀಡಿದ ಭರವಸೆಗಳನ್ನು ಅವರು ಈಡೇರಿಸಿಲ್ಲ. ಆದರೆ, ಉದ್ಯಮಿ ಅದಾನಿಗೆ ನೀಡಿದ ಎಲ್ಲಾ ಭರವಸೆ ಈಡೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಇಂದಿರಾ ಗಾಂಧಿ ಮಂಗಳೂರು ವಿಮಾನ ನಿಲ್ದಾಣ, ಬಂದರು ಎಂಸಿಎಫ್ ನಂತಹ ಕಾರ್ಖಾನೆಯನ್ನು ಇಲ್ಲಿ ಸ್ಥಾಪನೆ ಮತ್ತು ಅಭಿವೃದ್ಧಿ ಮಾಡಿರುವುದು ನನಗೆ ಗೊತ್ತಿದೆ. ಇಲ್ಲಿನ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ ಕೊಡುಗೆ ನೀಡಿದ್ದಾರೆ. ಇಂತಹ ಬ್ಯಾಂಕ್ ಗಳನ್ನು ಮೋದಿ ಸರಕಾರ ವಿಲೀನಗೊಳಿಸಿದೆ. ವಿಮಾನ ನಿಲ್ದಾಣ ವನ್ನು ಅದಾನಿಗೆ ನೀಡಿ ಇಲ್ಲಿನ ಜನರನ್ನು ನಿರ್ಲಕ್ಷಿಸಿ ದೆ ಎಂದರು.
ಬಿಜೆಪಿ 40 ಪರ್ಸೆಂಟ್ ಸರಕಾರ ಅವರಿಗೆ ಈ ಬಾರಿ ಕೇವಲ 40 ಸೀಟ್ ಮಾತ್ರ ನೀಡಿ. ಕಾಂಗ್ರೆಸ್ ಗೆ 150 ಸೀಟ್ ನಲ್ಲಿ ಜಯಗಳಿಸಿ ಎಂದು ರಾಹುಲ್ ಗಾಂಧಿ ಮನವಿ ಮಾಡಿದರು.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗಲೇ ನಾಲ್ಕು ಭರವಸೆಗಳನ್ನು (ಗ್ಯಾರಂಟಿ) ಘೋಷಿಸಿದೆ. ಗೃಹಲಕ್ಷ್ಮೀ ಯೋಜನೆ ಮೂಲಕ ಬಡ ಕುಟುಂಬಗಳ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ, ಬಡವರಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಹಾಗೂ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,000 ರೂ. ನೀಡುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ.