ಕಾಂಗ್ರೆಸ್ 5 ‘ಗ್ಯಾರಂಟಿ’ ಜಾರಿ: ಯೋಜನೆಗಳ ಲಾಭ ಪಡೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

Spread the love

ಕಾಂಗ್ರೆಸ್ 5 ‘ಗ್ಯಾರಂಟಿ’ ಜಾರಿ: ಯೋಜನೆಗಳ ಲಾಭ ಪಡೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಐದು ಗ್ಯಾರಂಟಿ ಯೋಜನೆಗಳ ಜಾರಿ ಯಾವಾಗ ಎಂಬ ಚರ್ಚೆ ರಾಜ್ಯಾದ್ಯಂತ ಶುರುವಾಗಿತ್ತು. ಈ ಯೋಜನೆಯ ಫಲಾನುಭವಿಗಳು ಯಾರಾಗಬಹುದು ಅನ್ನೋ ಕುತೂಹಲವೂ ಇತ್ತು. ಇದೀಗ ಯೋಜನೆಯನ್ನು ಜಾರಿ ಮಾಡುತ್ತಿರೋದಾಗಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಯೋಜನೆ ಅಡಿ ಮನೆ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂಪಾಯಿ, ಅನ್ನ ಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಇರುವ ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹ ಜ್ಯೋತಿ ಯೋಜನೆ ಅಡಿ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಯುವ ನಿಧಿ ಯೋಜನೆ ಅಡಿ ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲಮೋ ಮಾಡಿದವರಿಗೆ ಭತ್ಯೆ ಕೊಡುವ ಯೋಜನೆಗಳನ್ನು ಸರ್ಕಾರ ಪ್ರಕಟಿಸಿದೆ. ಪ್ರತಿಯೊಂದು ಯೋಜನೆಗಳ ಕುರಿತಾದ ಸಮಗ್ರ ವಿವರ ಇಲ್ಲಿದೆ..

ಗ್ಯಾರಂಟಿ 1 – ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್

 • ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ.
 • ಈ ಯೋಜನೆ ಆಗಸ್ಟ್‌ ತಿಂಗಳಿನಿಂದ ಜಾರಿಗೆ ಬರಲಿದೆ.
 • ಜುಲೈ ತಿಂಗಳ ವಿದ್ಯುತ್‌ ಬಿಲ್‌ ಅನ್ನು ಗ್ರಾಹಕರು ಪಾವತಿ ಮಾಡಬೇಕಾದ ಅಗತ್ಯ ಇಲ್ಲ.
 • ಆದರೆ, ಜುಲೈನಲ್ಲಿ ಬರುವ ಜೂನ್‌ ತಿಂಗಳ ವಿದ್ಯುತ್‌ ಬಿಲ್‌ ಅನ್ನು ಜನರು ಪಾವತಿ ಮಾಡಲೇ ಬೇಕು.
 • ವಾರ್ಷಿಕವಾಗಿ ಪ್ರತಿ ಮನೆಯಲ್ಲಿ ಬಳಕೆ ಮಾಡಲಾದ ಸರಾಸರಿ ವಿದ್ಯುತ್‌ ಪ್ರಮಾಣವನ್ನ ಲೆಕ್ಕ ಹಾಕಿ ಈ ಯೋಜನೆಯ ಫಲಾನುಭವಿಗಳನ್ನು ನಿರ್ಧರಿಸಲಾಗುತ್ತದೆ.
 • ಕಳೆದ 12 ತಿಂಗಳ ವಿದ್ಯುತ್‌ ಬಳಕೆಯ ಸರಾಸರಿಯನ್ನು ತೆಗೆದುಕೊಂಡು ಅದರ ಮೇಲೆ ಶೇ.10ರಷ್ಟು ವಿದ್ಯುತ್‌ ಅನ್ನು ಉಚಿತವಾಗಿ ನೀಡಲಾಗುತ್ತದೆ
 • ಒಂದು ವೇಳೆ ಪ್ರತಿ ತಿಂಗಳೂ ನಿಮ್ಮ ಮನೆಯಲ್ಲಿ ಸರಾಸರಿ 120 ಯೂನಿಟ್‌ ವಿದ್ಯುತ್‌ ಬಳಸಿದ್ದರೆ ನಿಮಗೆ ಮುಂದೆ 132 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಅನ್ನು ಸರ್ಕಾರ ನೀಡಲಿದೆ. ಇದೇ ರೀತಿ ನೀವು ಎಷ್ಟೇ ಯೂನಿಟ್‌ ಬಳಸಿದ್ದರೂ, ಅದರ ಸರಾಸರಿ + ಶೇ.10ರಷ್ಟು ಯೂನಿಟ್‌ ಅನ್ನು ಮಾತ್ರ ಸರ್ಕಾರ ಉಚಿತವಾಗಿ ನೀಡುತ್ತದೆ.
 • ಚುನಾವಣೆಯಲ್ಲಿ ಘೋಷಿಸಿದಂತೆ ಗರಿಷ್ಠ 200 ಯೂನಿಟ್‌ ಮಾತ್ರ ಪ್ರತಿ ಮನೆಗೆ ಉಚಿತ ವಿದ್ಯುತ್ ಸಿಗಲಿದೆ.

ಗ್ಯಾರಂಟಿ 2 – ಮನೆ ಯಜಮಾನಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂ.

 • ಗೃಹ ಲಕ್ಷ್ಮೀ ಯೋಜನೆಗೆ ಆಗಸ್ಟ್‌ 15ರಂದು ಚಾಲನೆ ಸಿಗಲಿದೆ.
 • ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ಹಣ ಸಿಗಲಿದೆ.
 • ಇದಕ್ಕಾಗಿ ಮನೆ ಯಜಮಾನಿ ತಮ್ಮ ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಒದಗಿಸಬೇಕಾಗುತ್ತದೆ.
 • ಯೋಜನೆಗಾಗಿ ಅರ್ಜಿ ಸಲ್ಲಿಸಬೇಕಾಗಿದೆ.
 • ಮನೆ ಯಜಮಾನಿ ಯಾರು ಅನ್ನೋದನ್ನ ಮನೆಯವರೇ ತೀರ್ಮಾನಿಸಬೇಕಿದೆ.
 • ಪ್ರತಿ ತಿಂಗಳೂ ಮನೆ ಯಜಮಾನಿಯ ಖಾತೆಗೆ 2,000 ರೂ. ಹಣ ಸರ್ಕಾರದಿಂದ ಜಮೆ ಆಗಲಿದೆ.
 • ಜೂನ್‌ 15ರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ.
 • ಆಗಸ್ಟ್‌ 15ರ ಒಳಗೆ ಅರ್ಜಿಗಳ ಪರಿಶೀಲನೆ ನಡೆಯಲಿದೆ.
 • ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ಯೋಜನೆಗೆ ಚಾಲನೆ ಸಿಗಲಿದೆ.
 • ಈ ಯೋಜನೆ ಎಲ್ಲರಿಗೂ ಅನ್ವಯ ಆಗಲಿದೆ.
 • ಬಿಪಿಎಲ್‌ ಅಥವಾ ಎಪಿಎಲ್‌ ಎಂಬ ಭೇದಭಾವ ಇರೋದಿಲ್ಲ
 • ಯಾವುದೇ ಆದಾಯದ ಮಿತಿಯೂ ಇಲ್ಲ.
 • ಸರಕಾರಿ ನೌಕರರಿಗೂ ಈ ಯೋಜನೆ ಅನ್ವಯ ಆಗುತ್ತೆ.
 • ಮನೆಯೊಡತಿ ತಮ್ಮ ಅರ್ಜಿಯನ್ನ ಆಫ್‌ಲೈನ್‌, ಆನ್‌ಲೈನ್‌ ಎರಡರಲ್ಲೂ ಹಾಕಬಹುದು
 • ಈಗಾಗಲೇ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳೂ ಕೂಡಾ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಬಹುದು.

​ಗ್ಯಾರಂಟಿ 3 – ಅನ್ನ ಭಾಗ್ಯ ಯೋಜನೆ ಅಡಿ 10 ಕೆಜಿ ಉಚಿತ ಅಕ್ಕಿ​

 • ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿಯೊಬ್ಬರಿಗೂ ಪ್ರತಿ ತಿಂಗಳೂ ತಲಾ 10 ಕೆ. ಜಿ. ಅಕ್ಕಿ ಉಚಿತವಾಗಿ ಸಿಗಲಿದೆ.
 • ಈ ಅನ್ನ ಭಾಗ್ಯ ಯೋಜನೆ ಜುಲೈ 1 ರಿಂದ ಜಾರಿ ಆಗಲಿದೆ.
 • ಈ ಯೋಜನೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆ ಮಾತ್ರ ಅನ್ವಯ ಆಗಲಿದೆ.
 • ಅಂತ್ಯೋದಯ ಯೋಜನೆಯಡಿ 35 ಕೆಜಿ ಅಕ್ಕಿ ಪಡೆಯುತ್ತಿರುವವರೂ ಕೂಡಾ ಅನ್ನ ಭಾಗ್ಯ ಯೋಜನೆಯಡಿ ಹತ್ತು ಕೆಜಿ ಆಹಾರ ಧಾನ್ಯ ಪಡೆಯಲು ಅರ್ಹರಾಗಿರುತ್ತಾರೆ.
 • ಎಪಿಎಲ್ ಕಾರ್ಡ್ ಇರುವವರಿಗೆ ಈ ಯೋಜನೆ ಅನ್ವಯ ಆಗೋದಿಲ್ಲ.
 • ಕೆಲವು ಸಂದರ್ಭಗಳಲ್ಲಿ 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಅಕ್ಕಿ ಹಾಗೂ ಮಿಕ್ಕ 5 ಕೆಜಿ ರಾಗಿ, ಗೋಧಿ ಮುಂತಾದ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಉದ್ದೇಶವೂ ಸರ್ಕಾರಕ್ಕೆ ಇದೆ.
 • ಈ ಕುರಿತಾಗಿ ಕಾಲ ಕಾಲಕ್ಕೆ ಬಿಪಿಎಲ್ ಕಾರ್ಡ್‌ದಾರರಿಗೆ ಮಾಹಿತಿ ಸಿಗಲಿದೆ.
 • ಆಯಾ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿ ಇರುವ ಆಹಾರ ಧಾನ್ಯಗಳನ್ನೇ ಸರ್ಕಾರ ನೀಡಲಿದೆ.

ಗ್ಯಾರಂಟಿ 4 – ಪದವೀಧರರು, ಡಿಪ್ಲೊಮೋ ಮಾಡಿದವರಿಗೆ ನಿರುದ್ಯೋಗ ಭತ್ಯೆ

 • 2022 – 23 ರಲ್ಲಿ ವ್ಯಾಸಂಗ ಮಾಡಿ ಉತೀರ್ಣರಾದ ಪದವೀಧರರಿಗೆ ಮುಂದಿನ 24 ತಿಂಗಳ ವರೆಗೆ ಪ್ರತಿ ತಿಂಗಳೂ ನಿರುದ್ಯೋಗ ಭತ್ಯೆ ಸಿಗಲಿದೆ.
 • ನಿರುದ್ಯೋಗಿ ಎಂದು ಘೋಷಿಸಿಕೊಂಡ ಎಲ್ಲ ಜಾತಿಯ ಪದವೀಧರರಿಗೆ ಈ ಯೋಜನೆ ಅನ್ವಯ ಆಗಲಿದೆ.
 • ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳೂ 3,000 ಸಾವಿರ ರೂಪಾಯಿ ಸಿಗಲಿದೆ.
 • ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ ಪ್ರತಿ ತಿಂಗಳೂ 1,500 ರೂ. ಭತ್ಯೆ ಸಿಗಲಿದೆ.
 • ಒಂದು ವೇಳೆ ಯೋಜನೆ ಜಾರಿಯಲ್ಲಿ ಇರುವಾಗಲೇ ಯಾವುದಾದರೂ ನಿರುದ್ಯೋಗಿ ಫಲಾನುಭವಿಗೆ ಕೆಲಸ ಸಿಕ್ಕಿದರೆ, ಅವರಿಗೆ ಈ‌ ಯೋಜನೆಯಡಿ ಸಿಗುತ್ತಿದ್ದ ಹಣ ನಿಂತು ಹೋಗುತ್ತದೆ.
 • ಈ ಯೋಜನೆಯನ್ನ ಜಾರಿ ಮಾಡೋ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಮಾಹಿತಿ ಸಂಗ್ರಹ ಕಾರ್ಯ ಶುರು ಮಾಡಿದೆ.
 • 2022 – 23 ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿದವರು ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬೇಕು.
 • ಮುಂದಿನ ಆರು ತಿಂಗಳ ಒಳಗಾಗಿ ಅರ್ಜಿ ಹಾಕಲು ಅವಕಾಶ ಇದೆ.
 • ಈ‌ ಯೋಜನೆ ಮಂಗಳ ಮುಖಿಯರಿಗೂ ಅನ್ವಯ ಆಗಲಿದೆ.

ಗ್ಯಾರಂಟಿ 5 – ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

 • ರಾಜ್ಯಾದ್ಯಂತ ಮಹಿಳೆಯರು ಜೂನ್ 11 ರಿಂದ ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದಾಗಿದೆ.
 • ಈ ಯೋಜನೆಗೆ ಯಾವುದೇ ನಿರ್ಬಂಧವನ್ನ ರಾಜ್ಯ ಸರ್ಕಾರ ವಿಧಿಸಿಲ್ಲ.
 • ಹವಾ ನಿಯಂತ್ರಿತ ಬಸ್‌ಗಳು ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಸರ್ಕಾರಿ ಬಸ್‌ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
 • ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು.
 • ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಮಹಿಳೆಯರು ಪ್ರಯಾಣಿಸಬಹುದು.
 • ಎಷ್ಟು ದೂರ ಪ್ರಯಾಣವನ್ನಾದರೂ ಮಾಡಬಹುದು.

Spread the love