
ಕಾಡಂಚಿನಲ್ಲಿ ಹಸಿವು ನೀಗಿಸೋಣ ಚಳುವಳಿ
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕಾಡಂಚಿನ ಹಾಡಿಗಳಲ್ಲಿ ವಾಸಮಾಡುವ ಆದಿವಾಸಿಗಳು ಲಾಕ್ ಡೌನ್ ಕಾರಣದಿಂದ ಕೂಲಿ ಕೆಲಸವಿಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು.
ಆದರೆ ಈಗ ಇವರ ನೆರವಿಗೆ ಆದಿವಾಸಿ ಕುಟುಂಬಗಳಿಗೆ ಹಸಿವು ನೀಗಿಸೋಣ ಚಳುವಳಿ ಬೆಂಗಳೂರು, (ಲೆಟ್ಸ್ ಫೀಡ್ ಹಂಗ್ರಿ ಸ್ಟಮಕ್ಸ್) ಬಾಲ್ಯ ಟ್ರಸ್ಟ್ ಮೈಸೂರು, ಬುಡಕಟ್ಟು ಕೃಷಿಕರ ಸಂಘ ಹುಣಸೂರು ಮತ್ತು ಡೀಡ್ ಸ್ವಯಂ ಸೇವಾ ಸಂಸ್ಥೆ ಮುಂದೆ ಬಂದು ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಿ ಹಸಿದ ಹೊಟ್ಟೆಯನ್ನು ತಣ್ಣಗಾಗಿಸಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ, ಬಿಲ್ಲೇನಹೊಸಹಳ್ಳಿ, ಲಕ್ಷ್ಮಣಪುರ, ಕರ್ಣಕುಪ್ಪೆ ಗಿರಿಜನ ಹಾಡಿ ಸೇರಿದಂತೆ ಒಟ್ಟು ಇನ್ನೂರು ಆದಿವಾಸಿ ಕುಟುಂಬಗಳಿಗೆ ಅಕ್ಕಿ, ರಾಗಿ ಮತ್ತು ಗೋಧಿ ಹಿಟ್ಟು, ಬೇಳೆ, ಅಡಿಗೆಎಣ್ಣೆ, ಉಪ್ಪು, ಸಾಂಬಾರ್ ಪುಡಿ, ಸೋಪು, ಸ್ಯಾನಿಟೈಜರ್, ಮಾಸ್ಕ್, ಸೇರಿದಂತೆ ಹಲವು ಅಗತ್ಯ ಪದಾರ್ಥಗಳನ್ನೊಳಗೊಂಡ ಆಹಾರದ ಕಿಟ್ ಗಳನ್ನು ವಿತರಿಸಲಾಗಿದೆ.
ಈ ವೇಳೆ ಮಾತಾನಾಡಿದ ಬೆಂಗಳೂರಿನ ಹಸಿವು ನೀಗಿಸೋಣ ಆಂದೋಲನದ ಮುಖ್ಯಸ್ಥ ಹರೀಶ್ ಅವರು, ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಹಾಡಿ ಸಮುದಾಯದ ಕುಟುಂಬಗಳು ಕೊರೊನಾ ಲಾಕ್‌ಡೌನ್‌ದಿಂದಾಗಿ ಸಂಕಷ್ಟಕ್ಕೀಡಾಗಿವೆ, ನಮ್ಮ ಆಂದೋಲನದ ವತಿಯಿಂದ ಹಾಡಿಯ ಒಂದು ಸಾವಿರ ಕುಟುಂಬಗಳಿಗೆ ಪಡಿತರ ಸಹಾಯವನ್ನು ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.
ಡೀಡ್ ಸಂಸ್ಥೆಯ ಮುಖ್ಯಸ್ಥ ಡಾ.ಶ್ರೀಕಾಂತ್ ಮಾತನಾಡಿ ಹಾಡಿ ಜನರಿಗೆ ಕೊರೊನಾದಿಂದಾಗುವ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿದಲ್ಲದೇ, ಕೆಲವು ಮುಖ್ಯ ಗಿಡ ಮೂಲಿಕೆಗಳಿಂದ ಕಷಾಯ ಮಾಡಿ ಕುಡಿಯುವುದರಿಂದ ಕೊರೊನಾದಿಂದ ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.
ಆಂದೋಲನದ ಸದಸ್ಯರಾದ ವಿಘ್ನೇಶ್, ರಮೇಶ್, ಬಾಲ್ಯ ಟ್ರಸ್ಟ್ ಸಂಸ್ಥೆಯ ಮುಖ್ಯಸ್ಥ ಅನಂತ್, ಡೀಡ್ ಸಂಸ್ಥೆಯ ಪ್ರಕಾಶ್, ಜಯಪ್ಪ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಇದ್ದರು.