ಕಾಡಾನೆಗಳ ಹಾವಳಿ ತಡೆಗೆ ರೈತರ ಆಗ್ರಹ

Spread the love

ಕಾಡಾನೆಗಳ ಹಾವಳಿ ತಡೆಗೆ ರೈತರ ಆಗ್ರಹ

ಹನೂರು: ಕಾಡಾನೆಗಳು ನಿರಂತರವಾಗಿ ರೈತರ ಜಮೀನುಗಳಿಗೆ ನುಗ್ಗಿ ಬೆಳೆದ ಫಸಲುಗಳನ್ನು ನಾಶಮಾಡುತ್ತಿದ್ದರೂ ಅರಣ್ಯ ಇಲಾಖೆಯವರು ಸೂಕ್ತ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿ ಹನೂರು ಹೊರವಲಯದ ಬೇಲದ ಕೆರೆ ಭಾಗದ ಜಮೀನಿನ ರೈತರು ಪಟ್ಟಣದಲ್ಲಿರುವ ವಲಯ ಅರಣ್ಯ ಅಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ವಲಯ ಅರಣ್ಯ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಪ್ರತಿದಿನ ಕಾಡಾನೆಗಳ ದಾಳಿಯಿಂದ ತತ್ತರಿಸಿದ್ದ ರೈತರ ಜಮೀನಿಗೆ ಸೋಮವಾರ ರಾತ್ರಿ ಕೂಡ ಕಾಡಾನೆಗಳು ದಾಳಿ ನಡೆಸಿ ಬೆಳೆಗಳನ್ನು ನಾಶಪಡಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ರೈತರ ಸಮಸ್ಯೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ವಲಯ ಅರಣ್ಯ ಅಧಿಕಾರಿಗಳ ಕಛೇರಿಗೆ ಧಾವಿಸಿದ ರೈತರು, ತುರ್ತಾಗಿ ಇಂದಿನಿಂದಲೇ ಕಾಡಾನೆಗಳು ಹಾಗೂ ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟಬೇಕು. ಹಿಂದಿನಂತೆ ಅರಣ್ಯ ಸಿಬ್ಬಂದಿ ರಾತ್ರಿ ವೇಳೆ ಗಸ್ತಿನಲ್ಲಿ ಕಾರ್ಯನಿರ್ವಹಿಸಬೇಕು, ಅಲ್ಲದೆ, ಈ ಭಾಗದಲ್ಲಿ ಕ್ಯಾಂಪ್ ಹಾಕಬೇಕೆಂದು ಒತ್ತಾಯಿಸಿದ ರೈತರು ಆನೆ ಬ್ಯಾರಿಕೆಡ್, ಟ್ರೆಂಚ್ ನಿರ್ಮಾಣ, ದುರಸ್ತಿಗೊಂಡಿರುವ ಸೋಲಾರ್ ಬ್ಯಾಟರಿ ರಿಪೇರಿ, ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಆಗ್ರಹಿಸಿದರು.

ರೈತರ ಸಮಸ್ಯೆಯನ್ನು ಆಲಿಸಿದ ವಲಯ ಅರಣ್ಯಾಧಿಕಾರಿ ಪ್ರವೀಣ್ ಅವರು ರೈತರನ್ನುದ್ದೇಶಿಸಿ ಮಾತನಾಡಿ, ನಾನು ಇತ್ತೀಚಿಗೆ ಅಧಿಕಾರವನ್ನು ವಹಿಸಿಕೊಂಡಿದ್ದು, ನಾಲ್ವರು ಸಿಬ್ಬಂದಿ ತರಬೇತಿಗೆ ತೆರಳಿದ್ದಾರೆ. ಹಾಗಾಗಿ ಸಿಬ್ಬಂದಿಗಳ ಕೊರತೆ ಇದೆ. ಇಂದಿನಿಂದಲೇ ವನ್ಯಜೀವಿಗಳ ತಡೆಗೆ ರಾತ್ರಿ ಪಾಳಿಯದಲ್ಲಿ ಸಿಬ್ಬಂದಿ ನಿಯೋಜಿಸಲಾಗುವುದು. ಈಗಾಗಲೇ ಕೆಲವಡೆ ಬ್ಯಾರಿಕೆಡ್ ನಿರ್ಮಾಣ, ಹ್ಯಾಂಗಿಂಗ್ ಸೋಲಾರ್ ತಂತಿ, ಕಂದಕ ನಿರ್ಮಾಣಗಳನ್ನು ಕೈಗೊಳ್ಳಲಾಗಿದೆ. ಇನ್ನುಳಿದ ಭಾಗದಲ್ಲಿ ವನ್ಯಜೀವಿಗಳ ದಾಳಿಯನ್ನು ತಡೆಯಲು ಕ್ರಮವಹಿಸಲಾಗುವುದು. ಈ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ರೈತರು ಮತ್ತು ಸಾರ್ವಜನಿಕರ ಸಹಕಾರವು ಅರಣ್ಯ ಇಲಾಖೆಗೆ ಅಗತ್ಯ ಎಂದರು.

ವಲಯ ಅರಣ್ಯಾಧಿಕಾರಿಗಳ ಭರವಸೆಯ ನಂತರ ರೈತ ಕೃಷ್ಣಮೂರ್ತಿ ಮಾತನಾಡಿ, ಇಂದಿನಿಂದ ಮತ್ತೆ ಆನೆ ದಾಳಿ ಹಾಗೂ ವನ್ಯ ಜೀವಿಗಳ ಹಾವಳಿ ಮುಂದುವರೆದರೆ ನಾವು ಬೇರೆ ರೀತಿ ಮಾತನಾಡಬೇಕಾಗುತ್ತದೆ, ನಮ್ಮ ಹೋರಾಟ ಮತ್ತು ಪ್ರತಿಭಟನೆ ಬೇರೆ ಸ್ವರೂಪದ್ದಾಗಿರುತ್ತದೆ. ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೈಕಲ್ ಶಾಪ್ ಸುಬ್ಬಣ್ಣ ಅವರು ಮಾತನಾಡಿ, ಅರಣ್ಯ ಇಲಾಖೆಯವರ ಕಟ್ಟುನಿಟ್ಟಿನ ನೀತಿ ನಿಯಮಗಳಿಂದ ನಮ್ಮ ಜಾನುವಾರುಗಳನ್ನು ಮಾರಾಟ ಮಾಡಲಾಗಿದೆ. ನಮ್ಮ ಜಮೀನುಗಳಿಗೆ ಕಾಡು ಪ್ರಾಣಿಗಳು ಬಾರದಂತೆ ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದರು.

ರೈತರು ವನ್ಯಜೀವಿಗಳು ಹಾವಳಿ ತಡೆಗಟ್ಟುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದರೆ, ಅರಣ್ಯ ಇಲಾಖೆ ಸಿಬ್ಬಂದಿ ರೈತರೊಡನೆ ಉಡಾಫೆ ಹಾಗೂ ಬೇಜವಬ್ದಾರಿತನದ ಹೇಳಿಕೆಯನ್ನು ನೀಡಿರುವುದರ ಬಗ್ಗೆ ಸಿಬ್ಬಂದಿ ಬಗ್ಗೆ ಆಕ್ರೋಶ ವ್ಯಕ್ತವಾದಾಗ ವಲಯ ಅರಣ್ಯ ಅಧಿಕಾರಿ ಪ್ರವೀಣ್ ಅವರು ಸಿಬ್ಬಂದಿ ಪರವಾಗಿ ಕ್ಷಮೆಯಾಚಿಸಿದರು.

ಇದೇ ವೇಳೆ ರೈತರು ಲಿಖಿತವಾಗಿಯೂ ವನ್ಯಜೀವಿಗಳ ಹಾವಳಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ವಹಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡ ರಾಜುಗೌಡ, ರೈತರಾದ ಗೋಪಾಲ ನಾಯ್ಡು, ಕೃಷ್ಣಮೂರ್ತಿ, ಚಿನ್ನಮಾದು, ಸುಬ್ಬಣ್ಣ, ಜಯಣ್ಣ, ನಾರಾಯಣ್, ಮಹೇಶ್, ಲೋಕೇಶ್, ವೆಂಕಟೇಗೌಡ, ರಾಜುಗೌಡ ಇನ್ನಿತರರಿದ್ದರು.


Spread the love