
ಕಾಡಾನೆ ಆರೈಕೆ ಮಾಡಿದ ಅರಣ್ಯ ಸಿಬ್ಬಂದಿಯನ್ನು ಶ್ಲಾಘಿಸಿದ ಮೋದಿ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಓಂಕಾರ ವಲಯ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ವಿದ್ಯುತ್ ಆಘಾತದಿಂದ ಅಸ್ವಸ್ಥಗೊಂಡಿದ್ದ ಹೆಣ್ಣು ಕಾಡಾನೆಗೆ ಚಿಕಿತ್ಸೆಗೆ ನೀಡಿ, ಅದನ್ನು ರಕ್ಷಿಸಿದ ಬಂಡೀಪುರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಅರಣ್ಯಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿರುವುದು ಅರಣ್ಯ ಇಲಾಖೆ ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಂತಸ ತಂದಿದೆ. ಫೆ.14ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಓಂಕಾರ ವಲಯ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವು ಬದುಕಿನ ಹೋರಾಟ ನಡೆಸುತ್ತಿತ್ತು. ಅದನ್ನು ಅರಣ್ಯ ಸಿಬ್ಬಂದಿ ಆರೈಕೆ ಮಾಡಿ ಚೇತರಿಸುವಂತೆ ಮಾಡಿದ್ದರು. ಇದು ಭಾರೀ ಸುದ್ದಿಯಾಗಿತ್ತು.
ಈ ನಡುವೆ ಕಾಡಾನೆಯ ರಕ್ಷಣೆ ಕಾರ್ಯಾಚರಣೆಯ ವೀಡಿಯೊ ಮತ್ತು ಫೋಟೊಗಳನ್ನು ಟ್ವೀಟ್ ಮಾಡಿರುವ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಯ ಕ್ಷಿಪ್ರ ಪ್ರಯತ್ನದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ಆನೆಯ ಜೀವವನ್ನು ಉಳಿಸಲು ಸಾಧ್ಯವಾಗಿರುವುದಕ್ಕೆ ಸಂತಸವಾಗಿದೆ. ಹೆಣ್ಣಾನೆಯನ್ನು ವಾಪಸ್ ಕಾಡಿಗೆ ಬಿಡಲಾಗಿದ್ದು, ಅದರ ಮೇಲೆ ನಿಗಾ ಇಡಲಾಗಿದೆ. ನಮ್ಮ ಅರಣ್ಯದ ಮುಂಚೂಣಿ ನೌಕರರು ನಮ್ಮ ಹೆಮ್ಮೆ ಎಂದು ಹೇಳಿದ್ದಾರೆ. ಅದನ್ನು ಶನಿವಾರ ಬೆಳಿಗ್ಗೆ ಪ್ರಧಾನಿ ಮೋದಿ ಅವರು ಸಚಿವರ ಟ್ವೀಟ್ ಹಂಚಿಕೊಂಡು, ಬಂಡೀಪುರ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ‘ಇದನ್ನು ನೋಡಿ ಸಂತೋಷವಾಯಿತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗೆ ಅಭಿನಂದನೆಗಳು. ನಮ್ಮ ಜನರಲ್ಲಿ ಇಂತಹ ಸಹಾನುಭೂತಿ ಇರುವುದು ಶ್ಲಾಘನೀಯ’ ಎಂದು ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಫೆ.14ರಂದು ವಿದ್ಯುತ್ ತಂತಿ ಬೇಲಿಯನ್ನು ಸ್ಪರ್ಶಿಸಿದ್ದ 25ರಿಂದ 30 ವರ್ಷದ ಹೆಣ್ಣಾನೆ ತೀವ್ರ ನಿತ್ರಾಣಗೊಂಡು ಅಸ್ವಸ್ಥಗೊಂಡಿತ್ತು. ಬಂಡೀಪುರದ ಪಶುವೈದ್ಯರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಪ್ರಯತ್ನದಿಂದ ಆನೆ ಚೇತರಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.