ಕಾಡಾನೆ ದಾಳಿಗೆ ಕಾವಲು ಕಾಯುತ್ತಿದ್ದ ರೈತ ಬಲಿ

Spread the love

ಕಾಡಾನೆ ದಾಳಿಗೆ ಕಾವಲು ಕಾಯುತ್ತಿದ್ದ ರೈತ ಬಲಿ

ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ತಾಲ್ಲೂಕಿನ ಮೊಳೆಯೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿನ ಕಾಡಂಚಿನ ಗ್ರಾಮವಾದ ಹಿರೇಹಳ್ಳಿಯ ಸೀಗವಾಡಿ ಬಳಿ ಕಾಡಾನೆ ದಾಳಿಗೆ ರೈತ ಬಲಿಯಾದ ಘಟನೆ ನಡೆದಿದೆ.

ತಾಲ್ಲೂಕಿನ ಮೊಳೆಯೂರು ಅರಣ್ಯ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಸೀಗವಾಡಿ ಬಳಿಯ ಅರಣ್ಯ ಇಲಾಖೆ ಕಚೇರಿ ಸಮೀಪವಿದ್ದ ಜಮೀನಿಗೆ ಎಂದಿನಂತೆ ಗ್ರಾಮದ ರೈತ ರವಿ(40) ಫಸಲಿನ ಕಾವಲಿಗೆ ಬಂದಿದ್ದಾರೆ. ಈ ವೇಳೆ ಆಹಾರ ಅರಸಿ ಜಮೀನಿಗೆ ನುಗ್ಗಿದ್ದ ಕಾಡಾನೆ ಏಕಾಏಕಿ ರವಿ ಮೇಲೆ ದಾಳಿ ಮಾಡಿದ್ದು, ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಭಾಗದಲ್ಲಿ ಫಸಲನ್ನು ಕಾಡುಪ್ರಾಣಿಗಳಿಂದ ರಕ್ಷಣೆ ಮಾಡಲು ರೈತರು ತಮ್ಮ ಜಮೀನಿನನ್ನು ರಾತ್ರಿಯ ವೇಳೆ ಕಾವಲು ಕಾಯುತ್ತಾರೆ. ಅದರಂತೆ ರವಿಯೂ ಗುರುವಾರ ರಾತ್ರಿ ಜಮೀನಿಗೆ ಆಗಮಿಸಿದ್ದಾರೆ. ಚಿಕ್ಕಬರಗಿ ಹೋಗುವ ರಸ್ತೆಯ ಬಳಿ ರೈಲು ಕಂಬಿ ಬ್ಯಾರೀಕೇಡ್ ನಿರ್ಮಿಸಲಾಗಿದ್ದು, ಗೇಟ್ ಅಳವಡಿಸಲಾಗಿದೆ. ಆದರೆ ತಡರಾತ್ರಿ ಇಲಾಖೆಯ ಸಿಬ್ಬಂದಿ ಗೇಟ್ ಹಾಕದ ಪರಿಣಾಮ ಆ ಭಾಗದಿಂದ ಕಾಡಾನೆ ಹೊರಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರವಿ ಜಮೀನಿನಲ್ಲಿ ಕಾವಲಿದ್ದಾಗ ಕಾಡಾನೆಯೊಂದು ಸೋಲಾರ್ ತಂತಿ ಬೇಲಿ ಹಾಗೂ ಬೈಕ್‌ನ್ನು ತುಳಿದಿದ್ದು, ಬಳಿಕ ರವಿಯವರ ಮೇಲೆಯೂ ದಾಳಿ ಮಾಡಿದೆ. ಇದರಿಂದ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿ ರೈತರು ಮಾಹಿತಿ ನೀಡಿದ್ದಾರೆ. ಬಳಿಕ ಅಕ್ಕಪಕ್ಕದ ರೈತರು ಕಾಡಾನೆಯನ್ನು ಹಿಮ್ಮೆಟ್ಟಿಸಿದ್ದು, ಹೆಡಿಯಾಲ ವಲಯ ಅಧಿಕಾರಿಗಳಿಗೂ ಹಾಗೂ ಮೊಳೆಯೂರು ವಲಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು, ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸತತ ಕಾಡಾನೆಗಳ ದಾಳಿ ನಡೆಯುತ್ತಿದ್ದರೂ ಅವುಗಳನ್ನು ನಿಯಂತ್ರಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಘಟನೆ ನಡೆದು ಬೆಳಗ್ಗೆ 10.30 ಆದರೂ ಸ್ಥಳಕ್ಕೆ ಮೊಳೆಯೂರು ವಲಯದ ಅಧಿಕಾರಿಗಳು ಬಾರದೆ ಇರುವುದು ಸಾರ್ವಜನಿಕರ ಆಕ್ರೋಶವನ್ನು ಹೆಚ್ಚಾಗುವಂತೆ ಮಾಡಿತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಪರಮೇಶ್ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೂ ಪಟ್ಟುಬಿಡದೆ ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.

ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ರೈಲ್ವೆ ಕಂಬಿ ಬ್ಯಾರೀಕೇಡ್‌ಗಳನ್ನು ಅಳವಡಿಸುವ ಜೊತೆಗೆ ರಾತ್ರಿಯ ವೇಳೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಕಾವಲು ಕಾಯಬೇಕು. ಮೊಳೆಯೂರು ವಲಯ ಅರಣ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆಗ್ರಹಿಸಿದರು.

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಬಂಡೀಪುರ ಸಿಸಿಎಫ್ ರಮೇಶ್ ಕುಮಾರ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಸರ್ಕಾರದಿಂದ ನೀಡುವ 15 ಲಕ್ಷ ರೂ. ಪರಿಹಾರದ ಪೈಕಿ 5 ಲಕ್ಷ ರೂ. ಪರಿಹಾರದ ಮೊತ್ತದ ಚೆಕ್ ಅನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಈಗ 5ಲಕ್ಷ ರೂ. ಚೆಕ್ ನೀಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಉಳಿದ 10 ಲಕ್ಷ ರೂ. ನೀಡಲಾಗುವುದು. ಅವರು ಪತ್ನಿಗೆ ಐದು ವರ್ಷಗಳವರೆಗೂ ಮಾಸಿಕ ವೇತನವನ್ನು ಕುಟುಂಬದ ಸದಸ್ಯರೊಬ್ಬರಿಗೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಸಂಬಂಧ ಸರಗೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಉಪ ನಿರೀಕ್ಷಕರಾದ ನಂದಿನಿ, ಡಿವೈಎಸ್‌ಪಿ ಮಹೇಶ್, ಎಸಿಎಫ್ ಪರಮೇಶ್, ಆರ್‌ಎಫ್‌ಓ ನಾರಾಯಣ್, ಸರಗೂರು ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್, ಪಿಎಸ್‌ಐ ಶ್ರವಣದಾಸ ರೆಡ್ಡಿ, ರವಿಶಂಕರ್, ರಪೀಲ್ ಖಾನ್,ಇಮ್ರಾನ್, ಅನಂದ್ ಮುಂತಾದ ಇಲಾಖೆಯ ಸಿಬ್ಬಂದಿ, ಬಿ ಮಟಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದೇವದಾಸ್, ಎಂ.ಎನ್‌. ಭೀಮರಾಜ್, ಎಂ ಎನ್ ಅಣ್ಣಯ್ಯಸ್ವಾಮಿ, ಗುಣಪಾಲ್, ಜಿ ಕೃಷ್ಣ, ಎಂ ಕೆ ಹರಿದಾಸ್, ರಮೇಶ್, ಬೀರೇಗೌಡ ಸೇರಿದಂತೆ ಗ್ರಾಮಸ್ಥರು ಇದ್ದರು.

 


Spread the love