ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ

Spread the love

ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಸರಗೂರು: ನುಗು ಜಲಾಶಯದ ಹಿನ್ನೀರಿನಲ್ಲಿರುವ ಗ್ರಾಮಗಳಿಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ತಡೆಗೆ ಅರಣ್ಯ ಇಲಾಖಾಧಿಕಾರಿಗಳು ಕ್ರಮವಹಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಸರಗೂರು ವಲಯ ಅರಣ್ಯ ಕಚೇರಿ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು ಕಾಡಾನೆಗಳಿಂದ ರೈತರ ಬೆಳೆಗಳು ಸಂಪೂರ್ಣವಾಗಿ ಹಾಳಾಗುತ್ತಿವೆ. ಸಾಲ ಮಾಡಿ ತಂದು ಬಿತ್ತನೆ ಮಾಡಲಾದ ರೈತರ ಬೆಳೆಗಳು ಕಾಡು ಪ್ರಾಣಿಗಳ ಹಾವಳಿಯಿಂದ ಹಾಳಾಗುತ್ತಿವೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಸೇರುತ್ತಿಲ್ಲ. ಇದಕ್ಕೆಲ್ಲ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ ರೈತರು ಇಲಾಖೆ ವಿರುದ್ಧ ವಿವಿಧ ಘೋಷಣೆ ಕೂಗಿದರು.

ಹಳೇ ಹೆಗ್ಗುಡಿಲು ಗ್ರಾಮವು ಮೊದಲು  ಸರಗೂರು ವಲಯ ಅರಣ್ಯ ವ್ಯಾಪ್ತಿಗೆ ಒಳಪಟ್ಟಿತ್ತು. ಈಗ ಮೊಳೆಯೂರು ವಲಯ ಅರಣ್ಯದ ವ್ಯಾಪ್ತಿಗೆ ಸೇರಿದೆ. ಆದರೆ, ಕಾಡಾನೆಗಳು ಹಾವಳಿ ವಿಷಯವನ್ನು ಮೊಳೆಯೂರು ವಲಯ ಅರಣ್ಯದ ಕಚೇರಿಗೆ ತಿಳಿಸಿದರೆ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಮೊಳೆಯೂರು ವಲಯ ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಪರಿಹಾರಕ್ಕಾಗಿ ರೈತರು ಅಲೆಯಬೇಕು ಹೀಗಾಗಿ ಹಳೇ ಹೆಗ್ಗುಡಿಲು ಗ್ರಾಮವನ್ನು ಸಮೀಪದಲ್ಲಿರುವ ಸರಗೂರು ವಲಯದ ವ್ಯಾಪ್ತಿಗೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸರಗೂರು ವಲಯ ಅರಣ್ಯಾಧಿಕಾರಿ  ಎಸ್.ಡಿ.ಮಧು, “ಚಿಕ್ಕದೇವಮ್ಮ ಬೆಟ್ಟ, ನುಗು ವನ್ಯಜೀವಿ ವಲಯದ ಮುಳ್ಳೂರು ಬೆಟ್ಟದಿಂದ ಆನೆಗಳು ಬರುತ್ತವೆ. ಕೊತ್ತೇಗಾಲ ಬೆಟ್ಟದಿಂದ ಹಳೆಹೆಗ್ಗುಡಿಲು ಗ್ರಾಮದವರೆಗೂ ಕಾಡಾನೆಗಳು ಹೆಚ್ಚು ಇವೆ. ಸಿಬ್ಬಂದಿ ಕೊರತೆ ಇದೆ. ಇನ್ನೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಂಡು ಕಾಡಾನೆ ಹಾವಳಿ ತಡೆಗೆ ಕ್ರಮವಹಿಸಲಾಗುವುದು. ರೈಲು ಕಂಬಿ ಅಳವಡಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಬಂದಕೂಡಲೇ ಸರಿಪಡಿಸುತ್ತೇವೆ. ಆನೆಗಳು ಇಳಿಯುವ ಜಾಗದಲ್ಲಿ ರಾತ್ರಿ ವೇಳೆಯಲ್ಲಿ ಗಸ್ತು ಮಾಡಿಸಲಾಗುವುದು,” ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.


Spread the love