ಕಾನೂನಿನ ಸಂಘರ್ಷದಲ್ಲಿ ಪತ್ರಕರ್ತ ಎಂದಿಗೂ ಏಕಾಂಗಿ: ವಿವೇಕಾನಂದ ಪನಿಯಾಳ ಕಳವಳ

Spread the love

ಉಡುಪಿ: ಕಾನೂನಿನ ಸಂಘರ್ಷದಲ್ಲಿ ಪತ್ರಕರ್ತ ಎಂದಿಗೂ ಏಕಾಂಗಿ: ವಿವೇಕಾನಂದ ಪನಿಯಾಳ ಕಳವಳ

ಉಡುಪಿ: ಪತ್ರಕರ್ತರು ಸಾಮಾಜಿಕ ಕಳಕಳಿಯ ವರದಿಗಳನ್ನು ನೀಡುವ ಮೂಲಕ ಸಮಾಜದಲ್ಲಿ ಸಾಕಷ್ಟು ಪರಿಣಾಮ ಬೀರುತ್ತಾರೆ. ಸುದ್ದಿಗಳನ್ನು ಬರೆಯುವಾಗ ಪದ ಬಳಕೆಯಲ್ಲಿ ಕೊಂಚ ಎಡವಿದರೂ ಆತ ಕಾನೂನಿನ ಸಂಘರ್ಷಕ್ಕೆ ಒಳಗಾಗಬೇಕಾಗುತ್ತದೆ. ಈ ಕಾನೂನಿನ ಹೋರಾಟದಲ್ಲಿ ಪತ್ರಕರ್ತ ಕೆಲಸ ನಿರ್ವಹಿಸುವ ಸಂಸ್ಥೆಯೂ ಆತನ ಪರ ನಿಲ್ಲುವುದಿಲ್ಲ. ಹೀಗಾಗಿ ಪತ್ರಕರ್ತ ಎಂದಿಗೂ ಏಕಾಂಗಿಯಾಗಿ ಹೋರಾಡಬೇಕಾಗುತ್ತದೆ ಎಂದು ಖ್ಯಾತ ವಕೀಲ, ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿವೇಕಾನಂದ ಪನಿಯಾಳ ಕಳವಳ ವ್ಯಕ್ತಪಡಿಸಿದರು.

ಪತ್ರಕರ್ತರು ಮತ್ತು ವಕೀಲರು ಜೊತೆಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಬಾಲ್ಯದಲ್ಲಿ ನನ್ನನ್ನು ತೀವ್ರವಾಗಿ ಕಾಡಿರುವ ಕ್ಷೇತ್ರ ಪತ್ರಿಕೋದ್ಯಮ. ಚಿಕ್ಕವನಿರುವಾಗ ಪತ್ರಕರ್ತನಾಗಬೇಕೆನ್ನುವ ತುಡಿತ ಇತ್ತು. ಬಾಲ್ಯದಲ್ಲಿ ಅಂದು ಹಿಡಿದ ಹುಚ್ಚು ಇಂದಿಗೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಇದು ನನ್ನ ವಕೀಲ ವೃತ್ತಿಗೂ ಸಹಕಾರಿಯಾಗಿದೆ ಎಂದರು.

ವಕೀಲರು ಹಾಗೂ ಪತ್ರಕರ್ತರ ಆಸಕ್ತಿಯ ಕ್ಷೇತ್ರ ಒಂದೇ. ಸಂವಿಧಾನ, ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಇಬ್ಬರ ಪಾತ್ರವೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಒಟ್ಟು ಸಮಾಜದ ಜನರ ಹಿತಕ್ಕಾಗಿ ಕೆಲಸ ಮಾಡುವಬಹು ಮುಖ್ಯವಾದ ಎರಡು ವೃತ್ತಿಗಳಿವು. ಈ ಎರಡೂ ಕ್ಷೇತ್ರಗಳಲ್ಲಿ ಗಾಂಧಿ ಕೆಲಸ ಮಾಡಿದ್ದರು ಎಂದರು.

ಸಮಾಜವನ್ನು ಅರ್ಥ ಮಾಡಿಕೊಂಡರೆ ಮಾತ್ರ ಈ ದೇಶದ ಕಾನೂನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ವಕೀಲರು, ಪತ್ರಕರ್ತರ ದಾರಿ ವಿಭಿನ್ನವಾಗಿ ಕಂಡರೂ ಅವರಿಬ್ಬರ ಗುರಿ ಒಂದೇ. ಪತ್ರಕರ್ತರು ಬರೆದ ಸುದ್ದಿಗಳಿಗೆ ಸರ್ಕಾರದ ಪತನವೂ ಆಗಬಹುದು. ಬದಲಾಗಿರುವ ಕಾನೂನಿನ ಚಿಂತನೆಗಳನ್ನು ಪತ್ರಕರ್ತರು ಅರಿತಿರಬೇಕು. ಸತ್ಯವನ್ನು ಇದ್ದ ಹಾಗೇ ಹೇಳಲು ಮಾಧ್ಯಮಕ್ಕೆ ಸಾಧ್ಯ ಎಂದರು.

ಪತ್ರಕರ್ತ ಪದ ಬಳಕೆಯಲ್ಲಿ ಕೊಂಚ ತಪ್ಪು ಮಾಡಿದರೆ ಆತನ ವಿರುದ್ದ ಮಾನಹಾನಿ ಪ್ರಕರಣ ದಾಖಲಾಗುತ್ತದೆ. ಸುದ್ದಿ ಪ್ರಕಟವಾದ ಬಳಿಕ ನಡೆಯುವ ಆಟ ಮತ್ತು ಚೆಲ್ಲಾಟದ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ನಾಗಭೂಷಣ್ ಉಡುಪ ಮಾತನಾಡಿ ಕೋವಿಡ್ ಸಂಕಷ್ಠ ಸಮಯದಲ್ಲಿ ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪತ್ರಕರ್ತರ ಸೇವೆ ಅಭಿನಂದನೀಯ ಎಂದರು.

ಕಾರ್ಯಕ್ರಮದಲ್ಲಿ ಪತ್ರಿಕಾ ದಿನಾಚರಣೆಯ ಗೌರವವನ್ನು ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಹಯೋಗದಲ್ಲಿ ಹಿರಿಯ ಪತ್ರಕರ್ತರಾದ ಸುವರ್ಣ ವಾಹಿನಿ ಜಿಲ್ಲಾ ವರದಿಗಾರ ಶಶಿಧರ ಮಾಸ್ತಿಬೈಲು, ವಿಜಯಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರ ಸುಬ್ರಹ್ಮಣ್ಯ ಭಟ್ ಕುರ್ಯ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಂ ಮಂಜುನಾಥ್ ಶುಭ ಹಾರೈಸಿದರು. ಮಲಬಾರ್ ಸಂಸ್ಥೆಯ ಉಡುಪಿ ಮುಖ್ಯಸ್ಥರುಗಳಾದ ಹಫೀಝ್ ರೆಹಮಾನ್, ತಂಝೀಮ್ ಶಿರ್ವ, ರಾಘವೇಂದ್ರ ನಾಯಕ್ ಉಪಸ್ಥೀತರಿದ್ದರು.

ಇದೇ ವೇಳೆ ಜಿಲ್ಲಾ ಪತ್ರಕರ್ತರ ಗುರುತಿನ ಚೀಟಿಗಳನ್ನು ಸದಸ್ಯರಿಗೆ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ವಹಿಸಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳೀ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.


Spread the love