ಕಾಪನಹಳ್ಳಿ ಗವಿಮಠದಲ್ಲಿ ಸಿದ್ಧಲಿಂಗೇಶ್ವರರ ಮಹಾರಥೋತ್ಸವ

Spread the love

ಕಾಪನಹಳ್ಳಿ ಗವಿಮಠದಲ್ಲಿ ಸಿದ್ಧಲಿಂಗೇಶ್ವರರ ಮಹಾರಥೋತ್ಸವ

ಕೃಷ್ಣರಾಜಪೇಟೆ: ತಾಲೂಕಿನ ಪುರಾಣ ಪ್ರಸಿದ್ಧ ಶರಣ ಶ್ರದ್ಧಾಕೇಂದ್ರ, ಪವಾಡಪುರುಷರಾದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರು ಜೀವಂತವಾಗಿ ಸಮಾಧಿಯಾಗಿರುವ ಗದ್ದುಗೆ ಹೊಂದಿರುವ ಪುಣ್ಯಕ್ಷೇತ್ರ ಕಾಪನಹಳ್ಳಿ ಗವಿಮಠದಲ್ಲಿ ಶ್ರೀಸ್ವತಂತ್ರ ಸಿದ್ಧಲಿಂಗೇಶ್ವರರ ಮಹಾರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಡಾ.ನಾರಾಯಣಗೌಡ, ತಹಶೀಲ್ದಾರ್ ನಿಸರ್ಗಪ್ರಿಯಾ, ಕೆಂಗೇರಿಯ ಬಂಡೆಮಠದ ಶ್ರೀಗಳು, ಗವಿಮಠದ ಪೀಠಾಧಿಪತಿ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿಗಳು ಹಾಗೂ ಮಾಜಿ ಸಿ.ಎಂ. ಯಡಿಯೂರಪ್ಪ ಅವರ ಸೋದರಳಿಯ ಸಿಂದಘಟ್ಟ ಅರವಿಂದ್ ಶ್ರೀರಥದಲ್ಲಿ ವಿರಾಜಮಾನವಾಗಿದ್ದ ಸಿದ್ಧಲಿಂಗೇಶ್ವರರ ಉತ್ಸವ ಮೂರ್ತಿ ಹಾಗೂ ಗದ್ದುಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ನೆರೆದಿದ್ದ ಭಕ್ತರನ್ನು ಉದ್ಧೇಶಿಸಿ ಮಾತನಾಡಿದ ಸಚಿವ ಡಾ.ನಾರಾಯಣಗೌಡ ಜಾತ್ರೆ ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿ ಗ್ರಾಮೀಣ ಜನರು ಎಲ್ಲರೂ ಒಂದಾಗಿ ಸ್ನೇಹ ಸಹಬಾಳ್ವೆಯಿಂದ ಜೀವನ ನಡೆಸಿದಾಗ ಪರಸ್ಪರ ಪ್ರೀತಿ ವಿಶ್ವಾಸವು ಹೆಚ್ಚಾಗಿ ಸಹೋದರತ್ವವು ಮೂಡುತ್ತದೆ. ಆದ್ದರಿಂದ ಜಾತ್ರೆ ರಥೋತ್ಸವಗಳು ನಮ್ಮ ಬದುಕಿನ ಒಂದು ಭಗವಾಗಿ ಬದಲಾಗಿದೆ.

ಎಡೆಯೂರು ಸಿದ್ಧಲಿಂಗೇಶ್ವರರ ಸಮಕಾಲೀನರಾಗಿರುವ ಸ್ವತಂತ್ರ ಸಿದ್ಧಲಿಂಗೇಶ್ವರರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಮಹಾನುಭವರಾಗಿದ್ದಾರೆ. ಪವಾಡಗಳ ಮೂಲಕ ಶ್ರೀಸಾಮಾನ್ಯರ ನೋವಿಗೆ ಧ್ವನಿಯಾಗಿದ್ದ ಸ್ವತಂತ್ರ ಸಿದ್ಧಲಿಂಗೇಶ್ವರರು ಗವಿಮಠದಲ್ಲಿ ಜೀವಂತವಾಗಿ ಸಮಾಧಿಯಾಗಿದ್ದಾರೆ ಎಂದು ಇತಿಹಾಸದಿಂದ ತಿಳಿಯುತ್ತದೆ. ಇಂತಹ ಪರಮಪೂಜ್ಯರು ಜೀವಂತ ಸಮಾಧಿಯಾಗಿರುವ ಗದ್ದುಗೆಯನ್ನು ಹೊಂದಿರುವ ಗವಿಮಠದ ಆರಾಧ್ಯದೈವವಾದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವದಲ್ಲಿ ಭಾಗವಹಿಸುವುದೇ ನಮ್ಮ ಸುಕೃತ ಪುಣ್ಯವಾಗಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.

ರಥೋತ್ಸವ ಕಾರ್ಯಕ್ರಮದಲ್ಲಿ ಮುಖಂಡರು ಮತ್ತು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ರಥ ಎಳೆದು ಸಂಭ್ರಮಿಸಿದರು.


Spread the love