
ಕಾಪು: ಅರ್ಧಂಬರ್ಧ ರಸ್ತೆ ಕಾಮಗಾರಿಗೆ ಇನ್ನೊಂದು ಬಲಿ! ಬೈಕ್ ಮತ್ತು ಆಂಬ್ಯುಲೆನ್ಸ್ ಢಿಕ್ಕಿ – ಸವಾರ ಸಾವು
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಪುವಿನಲ್ಲಿ ಬೈಕ್ಗೆ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಮೃತ ಬೈಕ್ ಸವಾರನನ್ನು ಉಚ್ಚಿಲ ನಿವಾಸಿ ರಿತೇಶ್ ದೇವಾಡಿಗ ಎಂದು ಗುರುತಿಸಲಾಗಿದೆ.
ರವಿವಾರ ಮಧ್ಯಾಹ್ನ ಉಚ್ಚಿಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬೈಕ್ಗೆ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ರಾ. ಹೆ. 66ರ ಕಾಪುವಿನಲ್ಲಿ ನಡೆಯುತ್ತಿರುವ ರಸ್ತೆ ಮರು ಡಾಮರೀಕರಣ ಕಾಮಗಾರಿಯ ಕಾರಣದಿಂದಾಗಿ ಮಂಗಳೂರು-ಉಡುಪಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯಿದ್ದು, ಅಂಬುಲೆನ್ಸ್ ಚಾಲಕ ವಿರುದ್ಧ ದಿಕ್ಕಿನಲ್ಲಿ ಆಂಬ್ಯುಲೆನ್ಸ್ ನ್ನು ಚಲಾಯಿಸಿಕೊಂಡು ಬಂದು ಬೈಕ್ಗೆ ಢಿಕ್ಕಿ ಹೊಡೆದಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡ ರಿತೇಶ್ ದೇವಾಡಿಗನನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ದಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರವಷ್ಟೇ ರಸ್ತೆದಾಟಲು ನಿಂತಿದ್ದ ಶಾಲಾ ಬಾಲಕಿಗೆ ವೇಗದೂತ ಬಸ್ಸೊಂದು ಡಿಕ್ಕಿ ಹೊಡೆದು ಸಾವನಪ್ಪಿದ ಘಟನೆಯ ಬೆನ್ನಲ್ಲೆ ಅರ್ಧಂಬರ್ಧ ರಸ್ತೆ ಕಾಮಾಗಾರಿಗೆ ಇನ್ನೊಂದು ಜೀವ ಬಲಿಯಾಗಿದೆ.