ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆ ಸ್ಪಷ್ಟನೆ ನೀಡಿದ್ದೇಕೆ?

Spread the love

ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆ ಸ್ಪಷ್ಟನೆ ನೀಡಿದ್ದೇಕೆ?

ಚಾಮರಾಜನಗರ: ಕೋವಿಡ್ ಚಿಕಿತ್ಸೆಯಲ್ಲಿ ಲೋಪದ ಕುರಿತಂತೆ ಕೆಲವರು ಆರೋಪ ಮಾಡುತ್ತಿರುವುದು ಕಪೋಲ ಕಲ್ಪಿತ ವೃಥಾ ಪ್ರಲಾಪ ಹಾಗೂ ಆಸ್ಪತ್ರೆಗೆ ಮಸಿ ಬಳಿಯುವ ಯತ್ನವೇ ಹೊರತು ಇದರಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಈ ಕುರಿತಂತೆ ಸಮಗ್ರ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಜನರ ಮುಂದಿಟ್ಟಿದೆ. ಆರು ದಶಕಗಳಿಂದ ಉತ್ತಮ ಸೇವೆ ಸಲ್ಲಿಸಿ ಸುವರ್ಣ ಮಹೋತ್ಸವ ಕಂಡಿದ್ದು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೋವಿಡ್ ರೋಗಿಗಳಿಗೂ ಚಿಕಿತ್ಸೆ ನೀಡಿ ಬಹುಪಾಲು ಗುಣಮುಖರನ್ನಾಗಿಸುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದೆ.

ಇದೀಗ ಕೋವಿಡ್ ಸಂಕಷ್ಟದಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಎರಡೂ ತಾಲ್ಲೂಕುಗಳ ಜನತೆಗೆ ಅನುಕೂಲವಾಗಲೆಂದು 24×7 ಕರ್ತವ್ಯ ನಿರ್ವಹಿಸುವ ಆಸ್ಪತ್ರೆಯಲ್ಲಿರುವ 100 ಬೆಡ್‌ಗಳಲ್ಲಿ 50 ಬೆಡ್‌ಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಟ್ಟು ಸರ್ಕಾರ ನಿಗದಿಗೊಳಿಸಿರುವ ದರದಲ್ಲಿ ಯಾವುದೇ ದುಪ್ಪಟ್ಟು ವಸೂಲು ಮಾಡದೆ ಪಾರದರ್ಶಕವಾಗಿ ನೀಡಿದ ಚಿಕಿತ್ಸೆಗನುಗುಣವಾಗಿ ಬಿಲ್ ನೀಡುತ್ತಿದ್ದು ರೋಗಿಗಳಿಂದ ಅಧಿಕ ವಸೂಲು ಮಾಡುತ್ತಿಲ್ಲ.

ನಗರ ಪ್ರದೇಶಗಳಿಗೆ ಹೋಲಿಸಿಕೊಂಡರೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯ ತನಕ 100 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು 101 ಮಂದಿ ಗುಣಮುಖರಾಗಿ ತೆರಳಿದ್ದರೆ ಅದರಲ್ಲಿ ತೀವ್ರ ರೋಗ ಉಲ್ಭಣ ಹಂತ ಹಾಗೂ ಇನ್ನಿತರೆ ಕಾರಣಗಳಿಂದ ದಾಖಲಾಗಿದ್ದವರಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ಆಸ್ಪತ್ರೆ ಮಂಡಳಿ ತಿಳಿಸಿದೆ.

ಕೋವಿಡ್ ಸೋಂಕಿತರು ಅಸಹಾಯಕರಾಗಿದ್ದು ಶೌಚಾಲಯಕ್ಕೂ ತೆರಳದಂತಹ ದುಸ್ಥಿತಿಯಲ್ಲಿದ್ದು ಅನ್ಯರನ್ನು ಆಶ್ರಯಿಸುವವರನ್ನು ನೋಡಿಕೊಳ್ಳಲು ಅವರ ಕಡೆಯ ಒಬ್ಬರಿಗೆ ಸುರಕ್ಷತೆಯಿಂದಿರಲು ಅವರುಗಳ ಆಶಯದ ಮೇರೆಗೆ ಸೂಚಿಸಿ ಅವಕಾಶ ನೀಡಿದ್ದನ್ನು ಬಿಟ್ಟರೆ ಅನ್ಯರಿಗೆ ಪ್ರವೇಶವಿಲ್ಲದಂತೆ ನೋಡಿಕೊಳ್ಳಲಾಗಿದೆ. ಅದು ಬಿಟ್ಟು ಸೋಂಕಿತರ ಜತೆಗೆ ಬಂದವರಿಗೆ ಸೋಂಕು ತಗುಲಿತು ಎಂಬುದಾದರೆ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ನರ್ಸ್‌ಗಳ ಪಾಡೇನು ಎಂದು ಸ್ಪಷ್ಟನೆ ನೀಡಿರುವ ಆಡಳಿತ ಮಂಡಳಿ ಸೋಂಕು ವ್ಯಾಪಿಸದಂತೆ ಕೋವಿಡ್ ಮಾರ್ಗಸೂಚಿಯಂತೆ ಸ್ಯಾನಿಟೈಸರ್ ಪಿಪಿಇ ಕಿಟ್ ಸೇರಿದಂತೆ ಸಕಲ ಸೌಲಭ್ಯಗಳನ್ನು ಹೊಂದಿಸಿಯೇ ಚಿಕಿತ್ಸೆ ನೀಡಲಾಗುತ್ತಿದ್ದು ಬೇಕಾ ಬಿಟ್ಟಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಸಾರ್ವಜನಿಕರ ಪ್ರಾಣದ ಜತೆಗೆ ಪ್ರಮುಖವಾಗಿ ಚಿಕಿತ್ಸೆ ನೀಡುವ ಆಸ್ಪತ್ರೆ ವೈದ್ಯ ವೃಂದ ಸಿಬ್ಬಂದಿ ವರ್ಗದ ಪ್ರಾಣವು ಅಮೂಲ್ಯವಾಗಿರುವುದರಿಂದ ಅತ್ಯಂತ ಜಾಗರೂಕತೆಯಿಂದಲೇ ಚಿಕಿತ್ಸೆ ಕ್ರಮವನ್ನು ನಿರ್ವಹಿಸಲಾಗುತ್ತಿದೆ ಎಂದಿದ್ದಾರೆ.

ಕೋವಿಡ್ ನಿಯಮ ಪಾಲನೆಯಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿರುವ ಈ ಆಸ್ಪತ್ರೆಯಲ್ಲಿ 9 ಜನ ನುರಿತ ವೈದ್ಯರು ಸೇರಿದಂತೆ 123 ಮಂದಿ ಸಿಬ್ಬಂದಿ ವರ್ಗದವರಿದ್ದು 24×7 ತುರ್ತು ನಿಘಾ ಘಟಕ, 24×7 ನವಜಾತ ಶಿಶುಗಳ ತುರ್ತು ನಿಘಾ ಘಟಕ, ಸುಸಜ್ಜಿತವಾದ ಹೆರಿಗೆ ಸೌಲಭ್ಯ, 24×7 ಆಂಬುಲೆನ್ಸ್, ಸ್ವಂತ ಪ್ರಯೋಗಾಲಯ ಸೌಲಭ್ಯ, ಔಷಧಾಲಯ ಸೇವೆ, 4 ಸುಸಜ್ಜಿತವಾದ ಶಸ್ತ್ರ ಚಿಕಿತ್ಸಾ ಘಟಕಗಳು, 24×7 ಕ್ಷ-ಕಿರಣ ಅಲ್ಟ್ರಾ ಸ್ಕ್ಯಾನಿಂಗ್ ಸೇವೆಗಳು, 24×7ತುರ್ತು ಸೇವೆಗಳು ಹಾಗೂ ಇನ್ನೂ ಅನೇಕ ಅತ್ಯಾಧುನಿಕ ಸೌಲಭ್ಯಗಳಲ್ಲದೆ ಆಸ್ಪತ್ರೆ ರೋಗಿಗಳ ಊಟೋಪಚಾರಕ್ಕಾಗಿ ಕ್ಯಾಂಟೀನ್ ಸೌಲಭ್ಯ, ವಾಹನ ನಿಲುಗಡೆಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಷ್ಟಲ್ಲದೆ ಖಾಸಗಿ ಆರೋಗ್ಯ ವಿಮಾ ಯೋಜನೆಗಳಾದ ಮೆಡಿ ಅಸಿಸ್ಟ್, ಹೆಚ್‌ಡಿಎಫ್‌ಸಿ ಎರ್ಗೊ, ಇಫ್ಕೋ ಟೋಕಿಯೋ, ಎಫ್‌ಎಚ್‌ಪಿಎಲ್, ವಿಡಲ್ ಹೆಲ್ತ್ ಪ್ಯಾರಾಮೌಂಟ್‌ಗಳ ಯೋಜನೆ ಹಾಗೂ ಸರ್ಕಾರಿ ಅರೆ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚದಲ್ಲಿ ರಿಎಂಬಾರ‍್ಸ್ ಮೆಂಟ್ ಸೌಲಭ್ಯವಿದ್ದು ಚಿಕಿತ್ಸೆ ನೀಡಿದ ನಂತರದಲ್ಲಿ ಬಿಲ್ ಪಾವತಿಸಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.


Spread the love