ಕಾಮನ್‍ವೆಲ್ತ್ ಗೇಮ್: ಕಂಚಿನ ಪದಕಕ್ಕೆ ಮುತ್ತಿಟ್ಟ ಕುಂದಾಪುರದ ‘ಏಕಲವ್ಯ’!, ಹುಟ್ಟೂರಲ್ಲಿ ಸಂಭ್ರಮ

Spread the love

ಕಾಮನ್‍ವೆಲ್ತ್ ಗೇಮ್: ಕಂಚಿನ ಪದಕಕ್ಕೆ ಮುತ್ತಿಟ್ಟ ಕುಂದಾಪುರದ ‘ಏಕಲವ್ಯ’!, ಹುಟ್ಟೂರಲ್ಲಿ ಸಂಭ್ರಮ

ಕುಂದಾಪುರ: ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ಗೆದ್ದುಕೊಡುವಲ್ಲಿ ಕುಂದಗನ್ನಡಿಗ ಗುರುರಾಜ ಪೂಜಾರಿ ಯಶಸ್ವಿಯಾಗಿದ್ದಾರೆ.

ಪುರುಷರ 61 ಕೆ.ಜಿ. ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 269 ಕೆಜಿ ಭಾರ ಎತ್ತುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಎರಡನೇ ಬಾರಿ ಭಾರತಕ್ಕೆ ಪದಕ ಗೆದ್ದು ಕೊಟ್ಟಿದ್ದಾರೆ. ಈ ಮೊದಲು 2018 ರಲ್ಲಿ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಪುರುಷರ 56 ಕೆಜಿ ವಿಭಾಗದಲ್ಲಿ ಗುರುರಾಜ್ ಪೂಜಾರಿ ಬೆಳ್ಳಿ ಜಯಿಸಿದ್ದರು.

ಬಡತನ ಮೆಟ್ಟಿ ನಿಂತು ಸಾಧನೆ:
ವಂಡ್ಸೆ ಮೂಲದ ಚಿತ್ತೂರಿನ ಚಾಲಕರಾಗಿರುವ ಮಹಾಬಲ ಪೂಜಾರಿ ಹಾಗೂ ಪದ್ದು ಪೂಜಾರಿ ದಂಪತಿಗಳ ಪುತ್ರನಾಗಿರುವ ಗುರುರಾಜ್ ಪ್ರಸ್ತುತ ಭಾರತೀಯ ವಾಯುಸೇನೆಯ ಉದ್ಯೋಗಿಯಾಗಿದ್ದಾರೆ. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದ ಚಿತ್ತೂರು ನಿವಾಸಿಯಾಗಿರುವ ಗುರುರಾಜ್ ತೀವ್ರ ಬಡತನದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆಯುವಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಕೊಲ್ಲೂರಿನ ಮೂಕಾಂಬಿಕಾ ದೇವಳ ಪ್ರೌಢ ಶಾಲೆ ಹಾಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕುಸ್ತಿಯಲ್ಲಿ ಆಸಕ್ತಿ ತೋರಿದ ಗುರುರಾಜ್‍ಗೆ ಸುಕೇಶ್ ಶೆಟ್ಟಿಯವರು ತರಬೇತಿ ನೀಡಿದ್ದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಉಜಿರೆಯ ಎಸ್‍ಡಿಎಂ ಕಾಲೇಜನ್ನು ಆಯ್ದುಕೊಂಡ ಬಳಿಕ ಗುರುರಾಜ್ ಬದುಕಿನ ತಿರುವೇ ಬದಲಾಯಿತು. ಅಲ್ಲಿನ ಕೋಚ್ ರಾಜೇಂದ್ರ ಪ್ರಸಾದ್ ಅವರು ವೇಟ್ ಲಿಫ್ಟಿಂಗ್‍ನಲ್ಲಿ ಮುಂದುವರೆಯುವಂತೆ ಪ್ರೋತ್ಸಾಹ ನೀಡಿದ್ದು, ನಿರಂತರವಾಗಿ ತರಬೇತಿ ಪಡೆದು ಅಲ್ಲಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಲೇ ಬಂದರು.

ಸಾಧನೆಗಳು ಹಲವು:
2017ರ ಆಸ್ಟ್ರೇಲಿಯಾದಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‍ಗಳಲ್ಲಿ ಚಿನ್ನ ಗೆದ್ದಿದ್ದು, ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ ಪಡೆದುಕೊಂಡಿದ್ದಾರೆ. 2018ರಲ್ಲಿ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಪುರುಷರ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ. ಇವರ ಈ ಎಲ್ಲಾ ಸಾಧನೆ ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ 2018ರಲ್ಲಿ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪ್ರಧಾನಿ ಟ್ವೀಟ್:
ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಟ್ವಿಟರ್‍ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಪದಕ ಗೆಲ್ಲುವ ನಿರೀಕ್ಷೆ ಇರಲಿಲ್ಲ – ಗುರುರಾಜ್ ಪೂಜಾರಿ
10 ದಿನದ ಹಿಂದೆ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಪದಕ ಗೆಲ್ಲುವ ನಿರೀಕ್ಷೆ ಇರಲಿಲ್ಲ. ಆದರೂ ನಾನು ಪ್ರಯತ್ನ ಮಾತ್ರ ಕೈ ಬಿಡಲಿಲ್ಲ. ಕನ್ನಡದ ಜನತೆ, ಕುಂದಾಪುರದವರಿಗೆ ಮೊತ್ತಮೊದಲಿಗೆ ಧನ್ಯವಾದಗಳು. ಕೇಂದ್ರ ಕ್ರೀಡಾ ಇಲಾಖೆ, ವೇಟ್‍ಲಿಫ್ಟಿಂಗ್ ಫೆಡರೇಶನ್, ವಾಯುಸೇನೆ, ರಾಜ್ಯ ಸರಕಾರ, ಅಪ್ಪ- ಅಮ್ಮ, ಪತ್ನಿ, ಅಣ್ಣಂದಿರು, ಮನೆಯವರೆಲ್ಲರಿಗೂ ನನ್ನ ವಂದನೆಗಳು. ನಿಮ್ಮೆಲ್ಲರ ಹಾರೈಕೆ ಫಲಿಸಿದೆ. ಪತ್ನಿ ಸೌಜನ್ಯಗೆ ಈ ಪದಕ ಅರ್ಪಿಸುತ್ತೇನೆ ಎಂದಿದ್ದಾರೆ ಗುರುರಾಜ್ ಪೂಜಾರಿ

ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ – -ಮಹಾಬಲ ಪೂಜಾರಿ

ಮಗ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿರುವುದು ಅತ್ಯಂತ ಖುಷಿ ನೀಡಿದೆ. ಒಂದಿನಿತು ಸಮಯ ವ್ಯರ್ಥ ಮಾಡದೇ ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿದ್ದ. ಕಾಮನ್‍ವೇಲ್ತ್ ಗೇಮ್ಸ್‍ಗೆ ತೆರಳುವಾಗಲೇ ಕೈ ನೋವು ಮಾಡಿಕೊಂಡಿದ್ದು, ಹೇಗೆ ಗೆಲ್ಲುತ್ತಾನೆ ಎನ್ನುವ ಭಯವಿತ್ತು. ಕೊನೆಗೂ ಭಾರತಕ್ಕೆ ಪದಕ ಗೆದ್ದು ಕೊಟ್ಟಿದ್ದಾನೆ. ಮಗನ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ ಎನ್ನುತ್ತಾರೆ ತಂದೆ ಮಹಾಬಲ ಪೂಜಾರಿ

ಮೊದಲ ಭಾರಿಗೆ ಪದಕ:
61ಕೆಜಿ ವಿಭಾಗದಲ್ಲಿ ಭಾರತ ಇದುರೆಗೂ ಪದಕ ಪಡೆದಿರಲಿಲ್ಲ. ಆದರೆ ಈ ಬಾರಿ ಪದಕ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಗುರುರಾಜ್ ನಿರಂತರವಾಗಿ ತರಬೇತಿ ಪಡೆದು ತಮ್ಮ ಸತತ ಪರಿಶ್ರಮದ ಮೂಲಕ ಮೊದಲ ಭಾರಿಗೆ 61ಕೆಜಿ ವಿಭಾಗದಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೆತ್ತವರ ಸಂಭ್ರಮ:
ಅತ್ತ ಗುರುರಾಜ್ ಪೂಜಾರಿ ಕಂಚಿನ ಪದಕಕ್ಕೆ ಮುತ್ತಿಡುತ್ತಿದ್ದಂತೆ ಇತ್ತ ಗುರುರಾಜ್ ಅವರ ಚಿತ್ತೂರಿನ ಮನೆಯಲ್ಲಿ ಹೆತ್ತವರ ಸಂಭ್ರಮ ಮುಗಿಲು ಮುಟ್ಟಿತು. ತಂದೆ-ತಾಯಿ, ಸಹೋದರರು, ಸಂಬಂಧಿಕರು ಸೇರಿ ಸಿಹಿ ಹಂಚಿ ಸಂಭ್ರಮ ಹಂಚಿಕೊಂಡರು. ಚಿತ್ತೂರು ಪೇಟೆಯಲ್ಲೂ ಗುರುರಾಜ್ ಸ್ನೇಹಿತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.


Spread the love

Leave a Reply

Please enter your comment!
Please enter your name here