ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದು ಉಡುಪಿಗೆ ಆಗಮಿಸಿದ ಗುರುರಾಜ್ ಪೂಜಾರಿಗೆ ಜಿಲ್ಲಾಡಳಿತದ ಗೌರವ

Spread the love

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದು ಉಡುಪಿಗೆ ಆಗಮಿಸಿದ ಗುರುರಾಜ್ ಪೂಜಾರಿಗೆ ಜಿಲ್ಲಾಡಳಿತದ ಗೌರವ

ಉಡುಪಿ: ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್-2022 ಕ್ರೀಡಾಕೂಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿರುವ ಕುಂದಾಪುರದ ಗುರುರಾಜ್ ಪೂಜಾರಿ ಅವರು ಉಡುಪಿಗೆ ಆಗಮಿಸಿದ್ದು ಜಿಲ್ಲಾಡಳಿತ ವತಿಯಿಂದ ಅದ್ದೂರಿ ಸ್ವಾಗತ ಕೋರಿ ಅಭಿನಂದಿಸಲಾಯಿತು.

ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ಗುರುರಾಜ್ ಪೂಜಾರಿ ಅವರನ್ನು ಜಿಲ್ಲಾಧಿಕಾರಿ ಕೂರ್ಮರಾವ್ ಎಮ್ ಅವರು ಜಿಲ್ಲಾಡಳಿತದ ಪರವಾಗಿ ಅಭಿನಂಧಿಸಿದರು.

ಈ ವೇಳೆ ಮಾತನಾಡಿದ ಗುರುರಾಜ್ ಪೂಜಾರಿ ಅವರು ಯಾವುದೇ ಕ್ರೀಡೆಯಾದರೂ ಪರಿಶ್ರಮ ಮುಖ್ಯ ಕಠಿಣ ಅಭ್ಯಾಸದೊಂದಿಗೆ ನಿರ್ದಿಷ್ಟ ಗುರಿ ಇದ್ದಲ್ಲಿ ಯಶಸ್ಸು ಖಂಡಿತ. ಯಾವ ಕ್ರೀಡೆಯಲ್ಲಿ ಯಾರಿಗೆ ಇಷ್ಟ ಇದ್ದರೂ ಅದರಲ್ಲಿ ಕಠಿಣ ಅಭ್ಯಾಸ ಮಾಡಿದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿದೆ. ಈ ಬಾರಿಯ ಕಾಮನ್ ವೆಲ್ತ್ ನಲ್ಲಿ ಭಾರತದ ಕ್ರೀಡಾಳುಗಳು ಉತ್ತಮ ಸಾಧನೆ ಮಾಡಿದ್ದು ತೃಪ್ತಿ ತಂದಿದೆ. ನನ್ನ ಪದಕವನ್ನು ನನ್ನ ಪತ್ನಿಗೆ ಸಮರ್ಪಿಸಿದ್ದೇನೆ ಎಂದರು.

ತನ್ನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಆಗಮಿಸಿದ ರಾಜ್ಯ ಸಭಾ ಸದಸ್ಯರು ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗುರುರಾಜ್ ಪೂಜಾರಿ ಧನ್ಯವಾದ ಸಲ್ಲಿಸಿದರು.

ಕಾಮನ್ ವೆಲ್ತ್ ಗೇಮ್ಸ್-2022ರಲ್ಲಿ ಭಾರತೀಯ ವೇಟ್ ಲಿಫ್ಟರ್‌ಗಳ ತಂಡ ಪಾಲ್ಗೊಂಡಿದ್ದು, ಗುರುರಾಜ್ ಕಂಚು ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಗುರುರಾಜ್ ಸತತ ಎರಡನೇ ಬಾರಿಗೆ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪಾಲ್ಗೊಂಡಿದ್ದು, ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಗುರುರಾಜ್ ಒಟ್ಟು 249 ಕೆಜಿ(111+138) ಭಾರ ಎತ್ತಿ ಬೆಳ್ಳಿಯ ಪದಕ ಗೆದ್ದಿದ್ದಲ್ಲದೆ, ತನ್ನ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಸಮಗಟ್ಟಿದರು. ಈ ಬಾರಿ 61 ಕೆಜಿ ವಿಭಾಗದಲ್ಲಿ ಗುರುರಾಜ್ ಸ್ಪರ್ಧಿಸಿದ್ದು, ಕಂಚಿನ ಪದಕ ಒಲಿಸಿಕೊಳ್ಳುವ ಮೂಲಕ ಎರಡನೇ ಬಾರಿ ದೇಶಕ್ಕಾಗಿ ಪದಕ ತಂದಿದ್ದಾರೆ.


Spread the love