ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ: ಕುಂದಾಪುರ ಮೂಲದ ದಂಪತಿ ಸೇರಿ ಮೂವರು ಮೃತ್ಯು

Spread the love

ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ: ಕುಂದಾಪುರ ಮೂಲದ ದಂಪತಿ ಸೇರಿ ಮೂವರು ಮೃತ್ಯು

ತರೀಕೆರೆ : ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಒಂದು ಕಾರಿನಲ್ಲಿದ್ದ ಚಾಲಕ ಸೇರಿ ದಂಪತಿ ಮೃತಪಟ್ಟು 11 ತಿಂಗಳ ಮಗುವೊಂದು ಅದೃಷ್ಟವಶಾತ್ ಪಾರಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.

ಕುಂದಾಪುರ ಮೂಲದವರಾದ ಅನಿಲ್‍ಕುಮಾರ್ ಹಾಗೂ ಅಶ್ವಿನಿ ಎಂಬ ದಂಪತಿ ತಮ್ಮ 11 ತಿಂಗಳ ಮಗುವಿನೊಂದಿಗೆ ನಾಗೇಂದ್ರ ಎಂಬವರ ಕಾರಿನಲ್ಲಿ ಶನಿವಾರ ಕುಂದಾಪುರದಿಂದ ಬೆಂಗಳೂರಿಗೆ ಹೊರಟಿದ್ದು, ಈ ಕಾರು ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿರುವ ಕೆರೆ ಏರಿಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕುಂದಾಪುರದಿಂದ ಬರುತ್ತಿದ್ದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಚಾಲಕ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ದಂಪತಿಯಾದ ಅನಿಲ್‍ಕುಮಾರ್ ಹಾಗೂ ಅಶ್ವಿನಿ ಅವರನ್ನು ಲಕ್ಕವಳ್ಳಿ ಪೊಲೀಸರು ಹಾಗೂ ಸ್ಥಳೀಯರು ಆಂಬುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ಕಳುಹಿಸಿದ್ದು, ದಂಪತಿ ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಕುಂದಾಪುರ ಮೂಲದವರಿದ್ದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದರೂ ಕಾರಿನಲ್ಲಿದ್ದ 11 ತಿಂಗಳ ಮಗು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಇನ್ನು ಮತ್ತೊಂದು ಕಾರಿನಲ್ಲಿದ್ದ ಅಶ್ವಥ್ ಹಾಗೂ ಕಿರಣ್ ಎಂಬವರು ತರೀಕೆರೆ ತಾಲೂಕಿನ ಕರಕುಚ್ಚಿ ಬಿ.ಕಾಲನಿ ನಿವಾಸಿಗಳಾಗಿದ್ದ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರು ಕರಕುಚ್ಚಿಯಿಂದ ತೀರ್ಥಹಳ್ಳಿಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love