ಕಾರ್ಕಳದಲ್ಲಿ ಗೋಕಳ್ಳರ ಅಟ್ಟಹಾಸ: ಗ್ರಾಮಾಂತರ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ! ಓರ್ವನ ಬಂಧನ

Spread the love

ಕಾರ್ಕಳದಲ್ಲಿ ಗೋಕಳ್ಳರ ಅಟ್ಟಹಾಸ: ಗ್ರಾಮಾಂತರ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನ! ಓರ್ವನ ಬಂಧನ

ಕಾರ್ಕಳ: ಶನಿವಾರ ರಾತ್ರಿ ಪಾಳಿಯಲ್ಲಿ ನಿರತರಾಗಿದ್ದ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕಾರು ಚಲಾಯಿಸಲು ಮುಂದಾದ ಘಟನೆ ಕಾರ್ಕಳ ಮಾಳಹುಕ್ರಟ್ಟೆ ರಸ್ತೆಯಲ್ಲಿ ಸಂಭವಿಸಿದ್ದು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡಬಿದ್ರೆ ಮಿಜಾರು ನಿವಾಸು ಸಯ್ಯದ್‌ ಜುಹಾದ್(31‌ ) ಎಂದು ಗುರುತಿಸಲಾಗಿದೆ.

ಭಾನುವಾರ ನಸುಕಿನ ವೇಳೆಯಲ್ಲಿ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ ಅವರು ತನ್ನ ಸಿಬಂದಿಗಳೊಂದಿಗೆ ಕಾರ್ಕಳ ತಾಲೂಕು ಮುಡಾರು ಗ್ರಾಮ ಹೆಪೆಜಾರು ಎಂಬಲ್ಲಿ ಬೀದಿ ದೀಪದ ಕೆಳಗಡೆ ಈ ಮೊದಲೇ ಹಾಕಿದ ಬ್ಯಾರಿಕೇಡ್ ಗಳ ಕೆಳಗಡೆ ಅನುಮಾನಾಸ್ಪದ ವ್ಯಕ್ತಿಗಳನ್ನು ಹಾಗೂ ವಾಹನಗಳನ್ನು ತಪಾಸಣೆ ಮಾಡುತ್ತಿದ್ದು ಬೆಳಗಿನ ಜಾವ 03:50 ಗಂಟೆಗೆ ಬಜಗೊಳಿ ಕಡೆಯಿಂದ ಮಾಳ ಕಡೆಗೆ ಓರ್ವ ಬೈಕ್ ಸವಾರ ಹಾಗೂ ಓರ್ವ ಕಾರು ಚಾಲಕ ಒಂದರ ಹಿಂದೆ ಒಂದರಂತೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು ವಾಹನಗಳನ್ನು ನಿಲ್ಲಿಸಲು ಸೂಚನೆ ನೀಡಿದ್ದರೂ ಕೂಡ ಬೈಕ್ ಸವಾರ ಹಾಗೂ ಕಾರಿನ ಚಾಲಕ ವಾಹನಗಳನ್ನು ನಿಲ್ಲಿಸದೇ ಪೊಲೀಸರ ಸೂಚನೆಯನ್ನು ಉಲ್ಲಂಘಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಕಾರನ್ನು ಬ್ಯಾರಿಕೇಡ್ ಗಳಿಗೆ ಹೊಡೆದು ಪೋಲೀಸರ ಮೇಲೆ ವಾಹನವನ್ನು ಹತ್ತಿಸಲು ಪ್ರಯತ್ನಿಸಿದ್ದು ಪೋಲೀಸರು ಹಾರಿ ರಸ್ತೆಗೆ ಬಿದ್ದು ತಪ್ಪಿಸಿಕೊಂಡಿದ್ದಾರೆ.

ಈ ವೇಳೆ ಕಾರಿನಲ್ಲಿ ಚಾಲಕನನ್ನು ಹೊರತು ಪಡಿಸಿ ಇನ್ನೋರ್ವ ವ್ಯಕ್ತಿ ಇದ್ದು ಕಾರಿನ ಒಳಗಡೆ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಕಂಡು ಬಂದಿದ್ದು ಕಾರಿನ ಚಾಲಕ ಕಾರನ್ನು ಅತೀವೇಗದಿಂದ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದು, ಠಾಣಾಧಿಕಾರಿ ಕೂಡಲೇ ಜೀಪಿನಲ್ಲಿ ಕಾರನ್ನು ಹಾಗೂ ಬೈಕ್ ನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಸುಮಾರು 3 ರಿಂದ 4 ಕಿ. ಮೀ. ದೂರ ಹುಕ್ರಟ್ಟೆ ಕ್ರಾಸ್ ದಾಟಿ ಹೋಗುತ್ತಿರುವಾಗ ಬೈಕ್ ಸವಾರ .ಸಯ್ಯದ್ ಜುಹಾದ್ ಪೊಲೀಸರು ಜೀಪಿನಲ್ಲಿ ಹಿಂಬಾಲಿಸುತ್ತಿರುವುದನ್ನು ಗಮನಿಸಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬೈಕ್ ನ್ನು ಅತಿವೇಗದಿಂದ ರಸ್ತೆ ತೀರಾ ಎಡಭಾಗಕ್ಕೆ ಚಲಾಯಿಸಿ ಬೈಕ್ ಸಮೇತ ರಸ್ತೆಯ ಬದಿಯ ಚರಂಡಿಗೆ ಬಿದ್ದು ಬೈಕ್ ನ್ನು ಅಲ್ಲಿಯೇ ಬಿಟ್ಟು ಓಡಲು ಪ್ರಯತ್ನಿಸಿದಾಗ ಆತನ್ನನ್ನು ಹಿಡಿದು ಪಿರ್ಯಾದುದಾರರು ಸಿ,ಪಿ,ಸಿ 1148 ನೇ ರಂಜಿತ್ ಕುಮಾರ್ ರವರ ಸಹಾಯದಿಂದ ಬೈಕ್ ಸವಾರ ಸಯ್ಯದ್ ಜುಹಾದ್ ಈತನನ್ನು ಹಿಡಿದು ವಿಚಾರಿಸಿದಾಗ ನಲ್ಲೂರು, ಬಜಗೋಳಿ. ಮಾಳ ಕಡೆ ರಸ್ತೆ ಬದಿಯಲ್ಲಿ ಮಲಗುತ್ತಿದ್ದ ದನಗಳನ್ನು ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ದನಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಉಳಿದ ಮೂವರು ಆರೋಪಿಗಳಾದ ಮೈಯದ್ದಿ, ಸುರೇಶ್‌, ಫಿರೋಜ್‌ ಎಂಬವರು ತಪ್ಪಿಸಿಕೊಂಡಿದ್ದಾರೆ. ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಒರ್ವ ಪೊಲೀಸರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love