ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ – ಸುನೀಲ್ ಕುಮಾರ್

Spread the love

ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ – ಸುನೀಲ್ ಕುಮಾರ್

ಬೆಂಗಳೂರು: ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಹಿಂದುತ್ವದ ಹೆಸರಿನಲ್ಲಿ ಏಕೆ ಚುನಾವಣೆ ಬಯಸುತ್ತಿದ್ದಾರೆ ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ. ಆದರೆ ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಕಾರ್ಕಳದಿಂದ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಸ್ಪರ್ಧೆ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಪ್ರಮೋದ್ ಮುತಾಲಿಕ್ ಅವರು ಆರ್ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಬಿಟ್ಟು ಯಾಕೆ ಹೊರಬಂದರು ಎಂಬುದಕ್ಕೆ ಉತ್ತರಿಸಲಿ ಎಂದು ಹೇಳಿದರು.

ಈ ಹಿಂದೆ ಅನಂತಕುಮಾರ್ ಮತ್ತು ಪ್ರಹ್ಲಾದ್ ಜೋಶಿ ವಿರುದ್ಧವೂ ಪ್ರಮೋದ್ ಮುತಾಲಿಕ್ ಅವರು ಸ್ಪರ್ಧಿಸಿದ್ದರು. ಚುನಾವಣೆಯ ಫಲಿತಾಂಶ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಮುಂದಿನ ಆಯ್ಕೆ ಯಾವುದೋ ಗೊತ್ತಿಲ್ಲ. ಈಗ ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕಾರ್ಕಳದಲ್ಲಿ ಹಿಂದುತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದಾಗಿದೆ. ಮುತಾಲಿಕ್ ತೆಗೆದುಕೊಂಡಿರುವ ನಿರ್ಧಾರ ನಾನ್ಯಾಕೆ ವಿರೋಧಿಸಲಿ ಎಂದು ಪ್ರಶ್ನಿಸಿದರು.

ಸುನೀಲ್ ಕುಮಾರ್ ಏನೆಂಬುದು ಕಾರ್ಕಳ ಕ್ಷೇತ್ರದ ಜನತೆ ನೋಡಿದ್ದಾರೆ. ಮುಂದೆಯೂ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ಮುತಾಲಿಕ್ ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ, ಮುಂದೆಯೂ ಮಾಡಬಹುದು. ಆದರೆ ನಾನು ಆ ವಿಚಾರಗಳಿಗೆ ಉತ್ತರ ನೀಡಲು ಹೋಗಲ್ಲ. ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುವುದಿಲ್ಲ. ಅಭಿವೃದ್ಧಿ ವಿಚಾರದ ಬಗ್ಗೆ ಕಾರ್ಕಳದ ಜನ ಪ್ರಶ್ನಿಸಿದರೆ ಉತ್ತರಿಸುತ್ತೇನೆ ಎಂದು ಸವಾಲೆಸೆದರು.

ಸುನಿಲ್ ಕುಮಾರ್ ಕಾರ್ಕಳ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ – ಬೊಮ್ಮಾಯಿ

ಇದಕ್ಕೂ ಮುನ್ನ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ ಎಂದು ಮುತಾಲಿಕ್ ಒತ್ತಾಯಿಸಿದ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮದು ರಾಷ್ಟ್ರೀಯ ಪಕ್ಷ. ಹೀಗಾಗಿ 224 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಹಾಕುತ್ತೇವೆ. ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಬಾರಿ ಗೆದ್ದು ಸಚಿವರಾಗಿದ್ದಾರೆ. ಅದು ಅವರದ್ದೇ ಕ್ಷೇತ್ರ ಎಂದು ಹೇಳುವ ಮೂಲಕ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸುನಿಲ್ ಕುಮಾರ್ ಕಾರ್ಕಳ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ ಎಂದರು.


Spread the love