ಕಾರ್ಕಳ: ಕೋವಿಡ್ ಲಸಿಕೆ ಪಡೆದು ಇತರರಿಗೆ ಮಾದರಿಯಾದ 101 ವರ್ಷದ ಅಜ್ಜಿ!

Spread the love

ಕಾರ್ಕಳ: ಕೋವಿಡ್ ಲಸಿಕೆ ಪಡೆದು ಇತರರಿಗೆ ಮಾದರಿಯಾದ 101 ವರ್ಷದ ಅಜ್ಜಿ!

 
ಕಾರ್ಕಳ: ಕುಕ್ಕುಂದೂರಿನಲ್ಲಿ ಇಂದು 101 ವರ್ಷದ ವೃದ್ಧೆಯೊಬ್ಬರೂ ತಮ್ಮ ಮನೆಗೆ ಭೇಟಿ ನೀಡಿದ ಆರೋಗ್ಯ ಕಾರ್ಯಕರ್ತರಿಂದ ಸ್ವಯಂ ಪ್ರೇರಿತರಾಗಿ ಕೋವಿಡ್ ನಿರೋಧಕ ಲಸಿಕೆ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ಇಲ್ಲಿನ ನಕ್ರೆ ರತಿ‌ ಪೂಜಾರ್ತಿ (101) ಎನ್ನುವರು ಮೊದಲ ಡೋಸ್ ಪಡೆದಿದ್ದಾರೆ. ಇವರಿಗೆ ಆರೋಗ್ಯ ಇಲಾಖೆಯ ಕುಮುದಾವತಿ, ಅನಿತಾ, ಆಶಾಕಾರ್ಯಕರ್ತೆ ಸುಮಾ ವ್ಯಾಕ್ಸಿನ್ ನೀಡಿದರು.

ಈ ಬಗ್ಗೆ ಉಡುಪಿ‌ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡು ಅಜ್ಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ”ಕಾರ್ಕಳ ತಾಲೂಕು ಕುಕ್ಕುಂದೂರು ನಲ್ಲಿ ಇಂದು 101 ವರ್ಷದ ವೃದ್ದೆಯೊಬ್ಬರೂ ತಮ್ಮ ಮನೆಗೆ ಭೇಟಿ ನೀಡಿದ ಆರೋಗ್ಯ ಕಾರ್ಯಕರ್ತರಿಂದ ಸ್ವಯಂ ಪ್ರೇರಿತರಾಗಿ ಕೋವಿಡ್ ನಿರೋಧಕ ಲಸಿಕೆ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೇ ರೀತಿ ಶೀಘ್ರದಲ್ಲಿ ಜಿಲ್ಲೆಯಲ್ಲಿ 100% ಲಸಿಕೆ ಗುರಿ ಸಾಧಿಸುವ ಸಲುವಾಗಿ , ಜಿಲ್ಲೆಯ ಪ್ರತಿಯೊಬ್ಬ ನಾಗರೀಕರು ಸ್ವಯಂ ಪ್ರೇರಿತರಾಗಿ ಎರಡು ಡೋಸ್ ಲಸಿಕೆ ಪಡೆಯುವುದರ ಮೂಲಕ ಜಿಲ್ಲೆಯನ್ನು ಕೋವಿಡ್19 ಮುಕ್ತವಾಗಿಸುವಂತೆ ಕೋರಿದೆ” ಎಂದು‌ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಇಂದು ಮೊದಲ ಡೋಸ್ 1172, ಎರಡನೇ ಡೋಸ್ 4477 ಸೇರಿದಂತೆ ಒಟ್ಟು 5649 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಮೊದಲ ಡೋಸ್ 9,49,780 (ಶೇ.95.07) ಮತ್ತು ಎರಡನೇ ಡೋಸ್ 771674 (ಶೇ. 77.24) ಮಂದಿ ಪಡೆದುಕೊಂಡಿದ್ದಾರೆ.


Spread the love