
ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ರಾಜ್ ರೈ ಬರ್ಬರ ಹತ್ಯೆ
ಪುತ್ತೂರು: ಮೂರು ವರ್ಷಗಳ ಹಿಂದೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್ ರೈ(28) ನನ್ನು ಪೆರ್ಲಂಪಾಡಿ ಬಳಿ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
2019 ಸೆ.3 ರಂದು ರಾತ್ರಿ ಸಂಪ್ಯದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬಳಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ (27) ರವರನ್ನು ಪುತ್ತೂರಿನ ಹೊರವಲಯ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಚರಣ್ ರಾಜ್ ಪತ್ನಿ ಪೆರ್ಲಂಪಾಡಿಯವರಾಗಿದ್ದು, ಅಲ್ಲಿಯೇ ಚರಣ್ ಮೆಡಿಕಲ್ ಶಾಪ್ ತೆರೆಯಲು ಸಿದ್ಧತೆ ನಡೆಸಿದ್ದು, ಪೆರ್ಲಂಪಾಡಿಯ ಮೇಲಿನ ಪೇಟೆಯ ಕಾಂಪ್ಲೆಕ್ಸ್ ಒಂದರಲ್ಲಿ ಮೆಡಿಕಲ್ ಶಾಪ್ ಗೆ ಅಂಗಡಿ ಸಜ್ಜುಗೊಳಿಸಿದ್ದು, ನಾಳೆ ಅದರ ಶುಭಾರಂಭ ನಡೆಯಲಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಂಗಡಿಗೆ ಬೇಕಾದ ವಸ್ತುಗಳನ್ನು ಜೋಡಿಸುವ ಕಾರ್ಯದಲ್ಲಿ ಚರಣ್ ತೊಡಗಿಸಿಕೊಂಡಿದ್ದರು. ಇಂದು ಸಂಜೆಯ ವೇಳೆ ಎರಡು ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಯುಧದಿಂದ ಚರಣ್ ಗೆ ಕಡಿದಿದ್ದಾರೆ. ಗಂಭೀರ ಗಾಯಗೊಂಡ ಅವರು ಬಳಿಕ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
2019ರ ಸೆ.4 ರಂದು ಗಣೇಶೋತ್ಸವದ ಪೆಂಡಾಲ್ ನಲ್ಲಿ ಕಾರ್ತಿಕ್ ಮೇರ್ಲ ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸಹೋದರರಾದ ಕಿರಣ್ ಮತ್ತು ಚರಣ್ ಹಾಗೂ ಮಂಗಳೂರು ನಿವಾಸಿ ಪ್ರಿತೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಚರಣ್ ಹಾಗೂ ಕಿರಣ್ ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಚರಣ್ ರಾಜ್ ಪತ್ನಿ ಮತ್ತು ಒಂದು ವರ್ಷದ ಮಗುವನ್ನು ಅಗಲಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.