ಕಾರ್ಪೋರೇಟ್ ಕಂಪೆನಿಗಳ ಹಿತ ಕಾಯುವ ಮೋದಿ ಸರಕಾರದಿಂದ ಕಾರ್ಮಿಕ ವರ್ಗದ ಏಳಿಗೆ ಅಸಾಧ್ಯ – ಸೀತಾರಾಮ ಬೇರಿಂಜಾ

Spread the love

ಕಾರ್ಪೋರೇಟ್ ಕಂಪೆನಿಗಳ ಹಿತ ಕಾಯುವ ಮೋದಿ ಸರಕಾರದಿಂದ ಕಾರ್ಮಿಕ ವರ್ಗದ ಏಳಿಗೆ ಅಸಾಧ್ಯ – ಸೀತಾರಾಮ ಬೇರಿಂಜಾ

ಸಮಸ್ತ ಜನಕೋಟಿಯ ಉದ್ದಾರ ಮಾಡುವುದಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಹೆಜ್ಜೆಹೆಜ್ಜೆಗೂ ಕಾರ್ಪೋರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿದೆಯೇ ಹೊರತು ಈ ದೇಶದ ಕಾರ್ಮಿಕ ವರ್ಗ ಸೇರಿದಂತೆ ಜನಸಾಮಾನ್ಯರ ಬದುಕನ್ನು ಉತ್ತಮ ಪಡಿಸಲು ಕಿಂಚಿತ್ತೂ ಗಮನ ಹರಿಸುತ್ತಿಲ್ಲ.ದೇಶದ ಸಂಪತ್ತನ್ನು ಹರಾಜು ಮಾಡುವ ಕೇಂದ್ರ ಸರ್ಕಾರ ದೇಶವನ್ನೇ ಮಾರಲು ಹೊರಟಿದೆ. ಇಂತಹ ಜನವಿರೋಧಿ ಸರಕಾರದಿಂದ ಕಾರ್ಮಿಕ ವರ್ಗದ ಏಳಿಗೆ ಅಸಾಧ್ಯ ಎಂದು AITUC ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜಾರವರು ಹೇಳಿದರು.


ಮಾರ್ಚ್ 28, 29ರಂದು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಜರುಗಲಿರುವ ಅಖಿಲ ಭಾರತ ಮಹಾಮುಷ್ಕರದ ತಯಾರಿಗಾಗಿ ಮಂಗಳೂರಿನಲ್ಲಿ ಆಯೋಜಿಸಲಾದ ದ.ಕ.ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಅವರು, ಈ ಮಾತುಗಳನ್ನು ಹೇಳಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಕಾರ್ಮಿಕ ವರ್ಗದ ಪ್ರಮುಖ 29 ಕಾನೂನುಗಳನ್ನು 4 ಸಂಹಿತೆಗಳನ್ನು ಮಾಡಲು ಹೊರಟಿರುವ ಕೇಂದ್ರ ಸರಕಾರವು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ ಬಂಡವಾಳಶಾಹಿಗಳ ಲಾಭವನ್ನು ಹೆಚ್ಚಿಸಲು ಹೊರಟಿದೆ.ಈ ಮೂಲಕ ಕಾರ್ಮಿಕರನ್ನು ಮತ್ತೆ ಜೀತದಾಳುಗಳನ್ನಾಗಿಸುವ ಹುನ್ನಾರ ನಡೆಸುತ್ತಿದೆ.ಸರಕಾರದ ನೀತಿಗಳಿಂದಾಗಿ ಗುತ್ತಿಗೆ ಕಾರ್ಮಿಕರು,ಯೋಜನಾ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನೇ ಕೊಳ್ಳೆ ಹೊಡೆಯುತ್ತಿದೆ.ಈ ಸಂದರ್ಭದಲ್ಲಿ ಜನತೆಯ ಬದುಕನ್ನು ರಕ್ಷಿಸುವ ಮೂಲಕ ದೇಶವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಬ್ಯಾಂಕ್ ನೌಕರರ ಸಂಘಟನೆಯ ರಾಜ್ಯ ನಾಯಕರಾದ ವಿನ್ಸೆಂಟ್ ಡಿಸೋಜ,ಫಣೀಂದ್ರ,ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯ ನಾಯಕರಾದ ರಾಘವ,ಸುರೇಶ್ ಹೆಗ್ಡೆರವರು ಮಾತನಾಡಿ,ಬ್ಯಾಂಕ್ ವಿಲೀನೀಕರಣದ ಹೆಸರಿನಲ್ಲಿ ದೇಶದ ಆರ್ಥಿಕತೆಯನ್ನು ಸರ್ವ ನಾಶದ ಅಂಚಿಗೆ ತಂದು ನಿಲ್ಲಿಸಿದ ಕೇಂದ್ರ ಸರಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದರು.

CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿ,AITUC ರಾಜ್ಯ ಸಮಿತಿ ಸದಸ್ಯರಾದ ಬಿ.ಶೇಖರ್ ರವರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು.ವೇದಿಕೆಯಲ್ಲಿ CITU ಜಿಲ್ಲಾ ಉಪಾಧ್ಯಕ್ಷ ರಾದ ವಸಂತ ಆಚಾರಿ,ವಿಮಾ ನೌಕರರ ಸಂಘದ ಮುಖಂಡರಾದ ಬಿ.ಎನ್ ದೇವಾಡಿಗರವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ AITUC ನಾಯಕರಾದ ಸುರೇಶ್ ಕುಮಾರ್ ರವರು ಸ್ವಾಗತಿಸಿದರೆ, ಕೊನೆಯಲ್ಲಿ CITU ನಾಯಕರಾದ ಜಯಂತ ನಾಯಕ್ ರವರು ವಂದಿಸಿದರು.


Spread the love