ಕಾರ್ಪೋರೇಟ್ ಕಂಪೆನಿಗಳ ಹಿತ ಕಾಯುವ ನರೇಂದ್ರ ಮೋದಿ ಸರಕಾರದಿಂದ ಕಾರ್ಮಿಕ ವರ್ಗ ಬೀದಿಪಾಲು – ಜೆ.ಬಾಲಕ್ರಷ್ಣ ಶೆಟ್ಟಿ 

Spread the love

ಕಾರ್ಪೋರೇಟ್ ಕಂಪೆನಿಗಳ ಹಿತ ಕಾಯುವ ನರೇಂದ್ರ ಮೋದಿ ಸರಕಾರದಿಂದ ಕಾರ್ಮಿಕ ವರ್ಗ ಬೀದಿಪಾಲು – ಜೆ.ಬಾಲಕ್ರಷ್ಣ ಶೆಟ್ಟಿ 

ಮಂಗಳೂರು: ಕಳೆದ 7 ವರ್ಷಗಳಿಂದ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರಕಾರ ಹೆಜ್ಜೆ ಹೆಜ್ಜೆಗೂ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ತನ್ನ‌ ಋಣ ಸಂದಾಯ ಮಾಡುತ್ತಿದೆ. ಜನತೆಗೆ ಒಳ್ಳೆಯ ದಿನಗಳನ್ನು ತರುವುದಾಗಿ ಆಶ್ವಾಸನೆ ನೀಡಿದ ಇದೇ ಸರಕಾರ ಜನರ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಮಾತ್ರವಲ್ಲದೆ ಕಾರ್ಮಿಕ ವರ್ಗದ ಕಾನೂನುಗಳನ್ನು ಮಾಲಕರ, ಬಂಡವಾಳಶಾಹಿಗಳ ಪರವಾಗಿ ತಿದ್ದುಪಡಿ ಮಾಡಿ ಮತ್ತೆ ಕಾರ್ಮಿಕ ವರ್ಗವನ್ನು ಜೀತದಾಳುಗಳನ್ನಾಗಿ ಪರಿವರ್ತಿಸುವ ಹುನ್ನಾರ ನಡೆಸುತ್ತಿದೆ. ಇಂತಹ ಕಾರ್ಮಿಕ ವಿರೋಧಿ ಸರಕಾರವನ್ನು ಕಿತ್ತೊಗೆಯುವವರೆಗೂ ದುಡಿಯುವ ವರ್ಗ ಒಂದು ಕ್ಷಣನೂ ವಿರಮಿಸಬಾರದು. ಐಕ್ಯತೆಯಿಂದ ಮುನ್ನುಗ್ಗಿ ಸಮರಶೀಲ ಹೋರಾಟದತ್ತ ದಾಪುಗಾಲನ್ನು ಇಡಬೇಕಾಗಿದೆ  ಎಂದು ಸಿಐಟಿಯು ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಹೇಳಿದರು.

ಅವರು ಸಿಐಟಿಯು ಮಂಗಳೂರು ನಗರ ಮಟ್ಟದ ಪ್ರಮುಖ ಕಾರ್ಯಕರ್ತರಿಗಾಗಿ ಆಯೋಜಿಸಲಾದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ,  ಕೇಂದ್ರದ ನರೇಂದ್ರ ಮೋದಿ ಸರಕಾರ ಕೋರೋನಾ ಹೆಸರಿನಲ್ಲಿ ದೇಶದ ಜನರನ್ನು ಭಯಭೀತಿಗೊಳಿಸಿದ್ದು ಮಾತ್ರವಲ್ಲದೆ ಕಾರ್ಮಿಕ ವಿರೋಧಿ ನೀತಿಗಳನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಿ ದುಡಿಯುವ ವರ್ಗಕ್ಕೆ ಪಂಗನಾಮ ಹಾಕಿತು. ಈಗಾಗಲೇ ದೇಶದ ಜನತೆ ಕೇಂದ್ರ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದು,ದೇಶಾದ್ಯಂತ ಕಾರ್ಮಿಕರ ಹೋರಾಟ, ಆಕ್ರೋಶಗಳು ಮುಗಿಲು ಮುಟ್ಟುತ್ತಿದೆ. ಪೆಬ್ರವರಿ 23,24 ರ ಅಖಿಲ ಭಾರತ ಮಹಾಮುಷ್ಕರವು ಭವಿಷ್ಯದ ಭಾರತಕ್ಕೆ ಹೊಸ ದಿಕ್ಸೂಚಿಯನ್ನು ನೀಡಲಿದೆ  ಎಂದು ಹೇಳಿದರು.

ಸಿಐಟಿಯು ಮಂಗಳೂರು ನಗರ ಪ್ರದಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರುರವರು ಮಂಗಳೂರು ನಗರದಾದ್ಯಂತ ಅಖಿಲ ಭಾರತ ಮಹಾಮುಷ್ಕರದ ಸಂದೇಶವನ್ನು ಸಾರಲು ವಿವಿಧ ವಿಭಾಗದ ಕಾರ್ಮಿಕರ ಪ್ರದೇಶ ಮಟ್ಟದ ಸಮಾವೇಶ, ಪಾದಯಾತ್ರೆ,ವಾಹನ ಪ್ರಚಾರ ಜಾಥಾ,ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮುಂತಾದ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಮಂಗಳೂರು ನಗರಾಧ್ಯಕ್ಷರಾದ ರವಿಚಂದ್ರ ಕೊಂಚಾಡಿಯವರು ವಹಿಸಿದ್ದರು.

ಕಾರ್ಯಾಗಾರದಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ,ಬಾಬು ದೇವಾಡಿಗ,ಭಾರತಿ ಬೋಳಾರ,ಜಯಲಕ್ಷ್ಮಿ ಜಪ್ಪಿನಮೊಗರು, ಸಂತೋಷ್ ಆರ್.ಎಸ್, ಸಿಐಟಿಯು ನಗರ ಮುಖಂಡರಾದ ವಿಲ್ಲಿ ವಿಲ್ಸನ್, ಹರೀಶ್ ಕೆರೆಬೈಲ್,ಪುಷ್ಪಾ ಶಕ್ತಿನಗರ,ಅಹಮ್ಮದ್ ಭಾವ ಹಾಗೂ ಬೀಡಿ,ಕಟ್ಟಡ, ಬೀದಿಬದಿ, ಹಮಾಲಿ, ಅಟೋರಿಕ್ಷಾ,ಬಿಸಿಯೂಟ ಸಂಘಟನೆಗಳ ಪ್ರಮುಖ ಮುಖಂಡರು ಹಾಜರಿದ್ದರು.


Spread the love