ಕಾರ್ಮಿಕರ ಬೆವರಿನ ಹಣ ಲೂಟಿ ಮಾಡಲು ಬಿಡೆವು: ಸುರೇಶ್ ಕಲ್ಲಾಗರ್

Spread the love

ಕಾರ್ಮಿಕರ ಬೆವರಿನ ಹಣ ಲೂಟಿ ಮಾಡಲು ಬಿಡೆವು: ಸುರೇಶ್ ಕಲ್ಲಾಗರ್

ಕುಂದಾಪುರ: ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿ ಆರೊಂಭಗೊಂಡ ದಿನದಿಂದಲೂ ಯಾವ ಸರ್ಕಾವೂ ಕಟ್ಟಡ ಕಾರ್ಮಿಕರ ಹಣದ ಮೇಲೆ ಕಣ್ಣು ಹಾಕಿಲ್ಲ. ಆದರೆ ಇದೀಗ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಟ್ಟಡ ಕಾರ್ಮಿಕರ ಹಣವನ್ನು ಲೂಟಿ ಮಾಡಲು ಮುಂದಾಗಿದೆ. ಬರೋಬ್ಬರಿ ಎರಡು ಸಾವಿರದ ಅರವತ್ತಾರು ಕೋಟಿ ರೂ. ಹಣವನ್ನು ವಿವಿಧ ಯೋಜನೆಗಳಿಗೆ ಮಂಜೂರು ಮಾಡಲು ತಯಾರಿ ನಡೆಸುತ್ತಿದೆ. ಕಾರ್ಮಿಕರ ಬೆವರಿನ ಹಣ ಲೂಟಿ ಮಾಡಲು ನಾವು ಬಿಡುವುದಿಲ್ಲ ಎಂದು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಅವರು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಕೋವಿಡ್ ಲಸಿಕೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 312 ಕೋಟಿ ರೂ. ಹಣ ದುರ್ಬಳಕೆ ಮಾಡಿರುವುದನ್ನು ಖಂಡಿಸಿ ಇಲ್ಲಿನ ಮಿನಿ ವಿಧಾನ ಸೌಧದ ಎದುರು ಗುರುವಾರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

40 ಲಕ್ಷ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ ಕೋವಿಡ್ ಲಸಿಕೆಯನ್ನು ನೀಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಕಲ್ಯಾಣ ಮಂಡಳಿಯ ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಿ ಅಲ್ಲಿಂದ ಕಾರ್ಮಿಕರಿಗೆ ಲಸಿಕೆಯನ್ನು ಕೊಡುತ್ತೇವೆ ಎಂದು ಸರ್ಕಾರ ಹೇಳಿದೆ. ಇದು ಭ್ರಷ್ಟಾಚಾರ ನಡೆಸಲು ಬಿಜೆಪಿ ಸರ್ಕಾರ ಮಾಡುತ್ತಿರುವ ನಾಟಕ. ಕಲ್ಯಾಣ ಮಂಡಳಿಯ ಅಧಿಕಾರಿಗಳಿಗೆ, ಕಾರ್ಮಿಕÀ ಸಚಿವರಿಗೆ ಕಮಿಶನ್ ಹೊಡೆಯುವ ಉದ್ದೇಶಕ್ಕಾಗಿಯೇ 312 ಕೋ ಹಣವನ್ನು ಮಂಜೂರು ಮಾಡಲಾಗುತ್ತಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೂ ಪಾಲಿದೆ ಎಂಬ ಅನುಮಾನ ದಟ್ಟವಾಗಿದೆ. ನಿಜವಾಗಿಯೂ ಮುಖ್ಯಮಂತ್ರಿಗಳಿಗೆ ಕಾರ್ಮಿಕರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಮಧ್ಯಪ್ರವೇಶಿಸಿ ಖಾಸಗಿ ಆಸ್ಪತ್ರೆಯ ಮೂಲಕ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕಟ್ಟಡ ಕಾರ್ಮಿಕರು ತಾವು ಬೆವರು ಸುರಿಸಿ ದುಡಿದ ಹಣವನ್ನು ಕಲ್ಯಾಣ ಮಂಡಳಿಗೆ ಕೊಟ್ಟಿದ್ದಾರೆ. ಕಾರ್ಮಿಕರ ವಂತಿಗೆಯ ಹಣವನ್ನು ಕಟ್ಟಡ ಕಾರ್ಮಿಕರ ಕುಟುಂಬಗಳಿಗಾಗಿ, ಅವರ ಮಕ್ಕಳ ವಿದ್ಯಾರ್ಥಿವೇತನ, ಅಪಘಾತ, ಪೆನ್ಶನ್, ಆರೋಗ್ಯಕ್ಕಾಗಿ ಮೀಸಲಿಟ್ಟಿರುವ ಹಣವನ್ನು ರಾಜ್ಯ ಸರ್ಕಾರ ಕೋವಿಡ್ ಲಸಿಕೆ ಹೆಸರಲ್ಲಿ ದುರ್ಬಳಕೆ ಮಾಡಲು ಹೊರಟಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಹಣ ಯಾವುದೇ ಕಾರಣಕ್ಕೂ ಆಡಳಿತ ನಡೆಸುವ ಸರ್ಕಾರಗಳು ಇತರ ಉದ್ದೇಶಗಳಿಗೆ ಬಳಸಬಾರದು ಎಂಬ ಸುಪ್ರೀಂ ಕೋರ್ಟ್‍ನ ಸ್ಪಷ್ಟ ನಿರ್ದೇನವಿದ್ದರೂ ರಾಜ್ಯ ಸರ್ಕಾರದ ಮಂತ್ರಿಗಳು, ಕಾರ್ಮಿಕ ಸಚಿವರು, ಕಲ್ಯಾಣ ಮಂಡಳಿಯ ಅಧಿಕಾರಿಗಳು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ಪಷ್ಟ ಉಲ್ಲಂಘನೆ ಮಾಡಿ ಅನ್ಯ ಉದ್ದೇಶಗಳಿಗಾಗಿ ಬಳಸುತ್ತಿರುವುದು ಖಂಡನೀಯ. ಒಂದು ಲಸಿಕೆಗೆ 780 ರೂ ಕೊಟ್ಟು ಖಾಸಗಿ ಆಸ್ಪತರೆಯವರಿಗೆ ಖರೀದಿ ಮಾಡಲು ಕೊಡುತ್ತಿದ್ದಾರೆ. ಇದನ್ನು ತಕ್ಷಣವೇ ತಡೆಹಿಡಿಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಕೈಗೊಳ್ಳುತ್ತೇವೆ ಎಂದರು.

ಕಲ್ಯಾಣ ಮಂಡಳಿಯಲ್ಲಿರುವ ಒಂಭತ್ತು ಸಾವಿರ ಕೋಟಿ ರೂ. ಮೇಲೆ ಬಿಜೆಪಿ ಸರ್ಕಾರಕ್ಕೆ ಕಣ್ಣು ಬಿದ್ದಿದೆ. ಕಾರ್ಮಿಕರ ಹಣವನ್ನು ಹೇಗಾದರು ಮಾಡಿ ಕಬಳಿಸಿ ತಾವು ಕಮಿಶನ್ ಗಿಟ್ಟಿಸಿಕೊಳ್ಳಬೇಕೆಂಬ ಹಪಾಹಪಿಯಲ್ಲಿದೆ. ಆಹಾರ ಕಿಟ್, ಆರೋಗ್ಯ ಕಿಟ್, ಇನ್ನೋವಾ ಕಾರು ಖರೀದಿ, ಸುರಕ್ಷಾ ಕಿಟ್, ಟೂಲ್ ಕಿಟ್‍ಗಳಲ್ಲಿ ಕಮಿಶನ್ ಆಸೆಗೋಸ್ಕರ ದೊಡ್ಡ ರೀತಿಯ ದಂಧೆಯಲ್ಲಿ ರಾಜ್ಯ ಸರ್ಕಾರ ಹಾಗೂ ಎಲ್ಲಾ ಮಂತ್ರಿಗಳು ಶಾಮೀಲಾಗಿ ಕಾರ್ಮಿಕರಿಗೆ ಸಿಗಬೇಕಾದ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇದನ್ನು ಸಿಡಬ್ಲ್ಯೂಎಫ್‍ಐ ತೀವ್ರವಾಗಿ ಖಂಡಿಸುತ್ತದೆ ಎಂದರು.

ಇದೇ ವೇಳೆಯಲ್ಲಿ ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಪಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಯು. ದಾಸ ಭಂಡಾರಿ, ಮುಖಂಡರಾದ ಸಂತೋಷ ಹೆಮ್ಮಾಡಿ, ಜಗದೀಶ್ ಆಚಾರ್, ಅರುಣ ಕುಮಾರ್, ರೇಣುಕಾ, ನೀಲಾ, ವಿಜೇಂದ್ರ ಕೋಣಿ ಇದ್ದರು.


Spread the love