
ಕಾರ್ಮಿಕರ ಮಕ್ಕಳನ್ನು ಶೈಕ್ಷಣಿಕ ಧನಸಹಾಯದಿಂದ ವಂಚಿಸುವ ಹುನ್ನಾರ – ಸುರೇಶ್ ಕಲ್ಲಾಗರ
ಕುಂದಾಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಧನಸಹಾಯಕ್ಕೆ ಪಡಿತರ ಚೀಟಿ ಜೋಡಣೆ ಕಡ್ಡಾಯ ಎಂಬ ನಿಯಮ ತಂದಿರುವುದು ಕಾರ್ಮಿಕರ ಮಕ್ಕಳನ್ನು ಶೈಕ್ಷಣಿಕ ಧನಸಹಾಯದಿಂದ ವಂಚಿಸುವ ಕ್ರಮವಾಗಿದೆ ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.
ಸೋಮವಾರ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ನಡೆದ ಜಂಟಿ ರೇಷನ್ ಕಾರ್ಡ್ ನಲ್ಲಿ ಹೆಸರು ಹಂಚಿಕೊಂಡಿರುವ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೂ ಶೈಕ್ಷಣಿಕ ಧನಸಹಾಯ ನೀಡಲು ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನಾ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.
2022-23ನೇ ಸಾಲಿನ ಶೈಕ್ಷಣಿಕ ಧನ ಸಹಾಯಕ್ಕೆ ಪಡಿತರ ಚೀಟಿ ಕಡ್ಡಾಯ ಹೊಸ ನಿಯಮ ತಂದಿರುವುದು ಕಾರ್ಮಿಕ ವರ್ಗದ ಬಡ ಜನರ ಸಬ್ಸಿಡಿ, ಸಹಾಯಧನ ಕಡಿತ ಮಾಡುವ ಹುನ್ನಾರವಾಗಿದೆ ಎಂದರು.
ಕೇಂದ್ರ ಸರ್ಕಾರದ ಒಂದು ದೇಶ ಒಂದು ರೇಷನ್, ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಭಾಷೆ ಎಂಬ ಆಕರ್ಷಕ ಘೋಷಣೆ ಹಿಂದೆ ಜನರನ್ನು ವಂಚಿಸುವ ಷಡ್ಯಂತ್ರ ಭಾಗವಾಗಿಯೇ ಮುಂದಿನ ದಿನಗಳಲ್ಲಿ ಒಂದು ದೇಶ ಒಂದು ವಿದ್ಯಾರ್ಥಿ ವೇತನ ಎಂಬ ನಿಯಮ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಶೀಘ್ರವಾಗಿ ಪಡಿತರ ಚೀಟಿಯ ಮಾನದಂಡ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸಭೆಯನ್ನುದ್ದೇಶಿಸಿ ಸಿಐಟಿಯು ಸಂಚಾಲಕ ಚಂದ್ರಶೇಖರ, ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ ಶಂಕರ್ ಮಾತನಾಡಿದರು.
ಧರಣಿ ನಂತರ ಕಟ್ಟಡ ಕಾರ್ಮಿಕರು ಪೇಟೆಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಕಾರ್ಮಿಕ ನಿರೀಕ್ಷಕರ ಪರವಾಗಿ ಕು.ಸಹನಾ ಮೂಲಕ ಮಂಡಳಿ ಜಂಟಿ ಕಾರ್ಯದರ್ಶಿ ಹಾಗೂ ಮಾನ್ಯ ತಹಸೀಲ್ದಾರ್ ಸಂತೋಷ ಭಂಡಾರಿ ಮೂಲಕ ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಮನವಿ ಓದಿದರು.
ಕಾರ್ಯದರ್ಶಿ ಶಶಿಕಾಂತ್ ಸ್ವಾಗತಿಸಿದರು. ವಿಜೇಂದ್ರ ಕೋಣಿ ವಂದಿಸಿದರು.
ಬೇಡಿಕೆಗಳು:
1.ಶೈಕ್ಷಣಿಕ ಧನಸಹಾಯಕ್ಕೆ ಪಡಿತರ ಚೀಟಿ ಕಡ್ಡಾಯ ಎಂಬ ನಿಯಮ ಕೈಬಿಡಬೇಕು.
2.2021-22 ರಲ್ಲಿ ಬಾಕಿ ಇರುವ ಶೈಕ್ಷಣಿಕ ಧನಸಹಾಯ ಮಂಜೂರು ಮಾಡಬೇಕು.
3.ಕಟ್ಟಡ ಕಾರ್ಮಿಕರ ನವೀಕರಣ ಈ ಹಿಂದೆ ಇದ್ದಂತೆ ಒಂದು ವರ್ಷ ಅವಧಿ ಇರಬೇಕು.
4.ಕರೋನ ಕಾಲದಲ್ಲಿ ತಿರಸ್ಕರಿಸಿದ ಅರ್ಜಿಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಫಲಾನುಭವಿಗಳಿಗೆ ಹಣ ಮಂಜೂರು ಮಾಡಬೇಕು.
5.ನಕಲಿ ಕಾರ್ಮಿಕರನ್ನು ನೋಂದಾವಣೆ ಮಾಡುವ ವ್ಯಕ್ತಿ, ಸೈಬರ್ ಗಳನ್ನು ನಿಯಂತ್ರಿಸಬೇಕು.
6.ಕುಂದಾಪುರ ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಖಾಯಂ ನಿರೀಕ್ಷಕರನ್ನು ನೇಮಕ ಮಾಡಬೇಕು.
7.ಕಾರ್ಮಿಕರ ಕಲ್ಯಾಣದ ಹಣಗಳನ್ನು ಕಿಟ್ ಗಳಿಗಾಗಿ ಖರ್ಚು ಮಾಡುತ್ತಿರುವುದು ನಿಲ್ಲಿಸಬೇಕು ಕಮಿಷನ್ ಹಾಗೂ ಖರೀದಿಯಲ್ಲಿ ನಡೆದ ಭ್ರಷ್ಟಾಚಾರ ತನಿಖೆ ಮಾಡಬೇಕು.