ಕಾರ್ಯಕರ್ತರ ಮೇಲೆ ದೌರ್ಜನ್ಯ ಮುಂದುವರಿದರೆ ಪ್ರತೀ ಠಾಣೆಯಲ್ಲೂ ಧರಣಿ: ಮಾಜಿ ಶಾಸಕ   ಗೋಪಾಲ ಪೂಜಾರಿ ಎಚ್ಚರಿಕೆ

Spread the love

ಕಾರ್ಯಕರ್ತರ ಮೇಲೆ ದೌರ್ಜನ್ಯ ಮುಂದುವರಿದರೆ ಪ್ರತೀ ಠಾಣೆಯಲ್ಲೂ ಧರಣಿ: ಮಾಜಿ ಶಾಸಕ   ಗೋಪಾಲ ಪೂಜಾರಿ ಎಚ್ಚರಿಕೆ

  • ನಾಲ್ಕು ಅವಧಿಗೆ ಶಾಸಕನಾಗಿದ್ದೇನೆ..ಎಲ್ಲರನ್ನೂ ಪ್ರೀತಿಯಿಂದಲೇ ನೋಡಿದ್ದೇನೆ: ಕೆ ಗೋಪಾಲ ಪೂಜಾರಿ

ಕುಂದಾಪುರ: ಪ್ರಕರಣವೊಂದರಲ್ಲಿ ಜಾಮೀನು ಪಡೆದ ಯುವಕನನ್ನು ವಿಚಾರಣೆಗಾಗಿ ಮತ್ತೆ ಪುನಃ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆಯನ್ನು ಖಂಡಿಸಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಯ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಂಡ್ಲೂರು ಪೊಲೀಸ್ ಠಾಣೆ ಎದುರು ಮಂಗಳವಾರ ನಡೆದಿದೆ.

ಕಳೆದ ವಾರ ಕ್ರಿಕೆಟ್ ಪಂದ್ಯಾಟವೊಂದರಲ್ಲಿ ನಡೆದ ಗಲಾಟೆ ವಿಚಾರದಲ್ಲಿ ನಾಗರಾಜ್ ಎನ್ನುವ ಯುವಕನ ವಿರುದ್ಧ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದಕ್ಕೆ ಆತ ತನ್ನ ವಕೀಲರ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದನು. ಆದರೆ ಏಕಾಏಕಿ ಮಂಗಳವಾರ ಮುಂಜಾನೆ ಪೆÇಲೀಸರು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರ ತಿಳಿಯುತ್ತಲೇ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ನೂರಾರು ಮಂದಿ ಪಕ್ಷಾತೀತವಾಗಿ ಠಾಣೆಯೆದುರು ಜಮಾಯಿಸಿದರು.

ನಾಲ್ಕು ಅವಧಿಗೆ ಶಾಸಕನಾಗಿದ್ದೇನೆ..ಎಲ್ಲರನ್ನೂ ಪ್ರೀತಿಯಿಂದಲೇ ನೋಡಿದ್ದೇನೆ:
ಈ ಬಗ್ಗೆ ಠಾಣೆಗೆ ಭೇಟಿ ಕೊಟ್ಟ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರು, ಕಳೆದ ಕೆಲ ತಿಂಗಳುಗಳಿಂದ ಪೊಲೀಸ್ ಅಧಿಕಾರಿಗಳನ್ನು ಬೆದರಿಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರ ವಿರುದ್ದ ಪ್ರಕರಣ ದಾಖಲು ಮಾಡಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ನಾವು ಎಲ್ಲಾ ಪೊಲೀಸ್ ಠಾಣೆಯಲ್ಲೂ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೇನೆಂದು ಬೆದರಿಸಿ ಅವರ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ತಂತ್ರಗಾರಿಕೆಯನ್ನು ಹೆಣೆಯಲಾಗುತ್ತಿದೆ. ಆದರೆ ಅವರ ಈ ತಂತ್ರಗಾರಿಕೆ ಯಶಸ್ಸು ಕೊಡುವುದಿಲ್ಲ. ನಾಲ್ಕು ಅವಧಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಅವಧಿಯಲ್ಲಿ ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುತ್ತೇನೆ, ನೀರಿಲ್ಲದ ಜಾಗಕ್ಕೆ ಕಳುಹಿಸುತ್ತೇನೆಂದು ನಾನು ಬೆದರಿಸಿಲ್ಲ. ಎಲ್ಲರನ್ನೂ ಪ್ರೀತಿಯಿಂದಲೇ ನೋಡಿದ್ದೇನೆ. ಬೈಂದೂರು ವಿಧಾನಸಭಾ ವ್ಯಾಪ್ತಿಯ ಪ್ರತೀ ಠಾಣೆಯಲ್ಲೂ ಇದೇ ಪರಿಸ್ಥಿತಿ ಇದೆ. ಶಾಸಕರ ನಡೆಯಿಂದಾಗಿ ಈ ಭಾಗಕ್ಕೆ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಸರ್ಕಲ್ ಇನ್ಸ್‍ಪೆಕ್ಟರ್ ಗೋಪಿಕೃಷ್ಣ ಹಾಗೂ ಠಾಣಾಧಿಕಾರಿ ರಾಜ್‍ಕುಮಾರ್ ಜೊತೆ ಮಾತುಕತೆ ನಡೆಸಿದ ಬಳಿಕ ಶಾಸಕರು ನಮ್ಮ ಕಾರ್ಯಕರ್ತರಾಗಲಿ ಅಥವಾ ಯಾರೇ ಆಗಲಿ. ತಪ್ಪು ಮಾಡಿದರೆ ಕ್ರಮಕೈಗೊಳ್ಳಿ. ಅದಕ್ಕೆ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ನಿಮ್ಮ ಬಗ್ಗೆ ನಮಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ ರಾಜಕೀಯ ಒತ್ತಡಕ್ಕೆ ಮಣಿದು ಸುಖಾಸುಮ್ಮನೆ ದೌರ್ಜನ್ಯವೆಸಗಬೇಡಿ ಎಂದು ಮನವಿ ಮಾಡಕೊಂಡಿದರು.

 ನಮಗೆ ಯಾರ ಒತ್ತಡವೂ ಇಲ್ಲ:
ಈ ಬಗ್ಗೆ ಮಾತನಾಡಿದ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಿನಾಥ್, ನಮಗೆ ಯಾವುದೇ ಒತ್ತಡಗಳಿಲ್ಲ. ವಿಚಾರಣೆಗೆ ಬರಲು ನೋಟೀಸ್ ಕೊಟ್ಟಿದ್ದೇವೆ. ಬಾರದ ಹಿನ್ನೆಲೆ ಠಾಣೆಗೆ ಕರೆದುಕೊಂಡು ಬಂದಿದ್ದೇವೆ. ನಾವು ಕಾನೂನು ಪ್ರಕಾರವಾಗಿಯೇ ವಿಚಾರಣೆಗೆ ಕರೆತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆಯಲ್ಲಿ ಕಾಂಗ್ರೆಸ್‍ನ ಶರತ್ ಕುಮಾರ್ ಶೆಟ್ಟಿ, ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಸಂಪಿಗೇಡಿ ಸಂಜೀವ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಸುದೀಶ್ ಶೆಟ್ಟಿ, ಪ್ರಶಾಂತ್ ಕರ್ಕಿ, ಬಿಜೆಪಿಯ ಕರಣ್ ಪೂಜಾರಿ, ಪ್ರಜ್ವಲ್ ಶೆಟ್ಟಿ ಮೊದಲಾದವರು ಇದ್ದರು.


Spread the love