ಕಾಲು ಸಂಕಗಳ ನಿರ್ಮಾಣಕ್ಕೆ 20 ಕೋಟಿ ಅನುದಾನ ಬಿಡುಗಡೆಗೆ ಪ್ರಯತ್ನ: ಸಂಸದ ಬಿವೈಆರ್ ಭರವಸೆ

Spread the love

ಕಾಲು ಸಂಕಗಳ ನಿರ್ಮಾಣಕ್ಕೆ 20 ಕೋಟಿ ಅನುದಾನ ಬಿಡುಗಡೆಗೆ ಪ್ರಯತ್ನ: ಸಂಸದ ಬಿವೈಆರ್ ಭರವಸೆ
 

ಕುಂದಾಪುರ: ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ 250 ಕಾಲು ಸಂಕಗಳನ್ನು ಪಟ್ಟಿ ಮಾಡಲಾಗಿದ್ದು, ಈಗಾಗಲೇ ಶಾಸಕರ ಮುತುವರ್ಜಿಯಿಂದ 10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಇದರ ಮುಂದುವರಿದ ಭಾಗವಾಗಿ ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ಮಾತನಾಡಿ ಇಂದು ಮತ್ತೆ 5 ಕೋಟಿ ಅನುದಾನದ ಅನುಮೋದನೆಯನ್ನು ಪಡೆದುಕೊಂಡು ಬಂದಿದ್ದೇನೆ. ಕಾಲು ಸಂಕಗಳ ಅಭಿವೃದ್ದಿಗೆ ಇನ್ನೂ ಹದಿನೈದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿವೈ ರಾಘವೇಂದ್ರ ಭರವಸೆ ನೀಡಿದರು.

ಅವರು ಗುರುವಾರ ಮಧ್ಯಾಹ್ನ ಕೊಲ್ಲೂರಿನ ವಸತಿಗೃಹದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಇತ್ತೀಚೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಾದ ಅತಿವೃಷ್ಠಿಯಿಂದಾಗಿ ಸಾಕಷ್ಟು ಆಸ್ತಿ-ಪಾಸ್ತಿಗಳು ಹಾನಿಯಾಗಿವೆ. ಅತಿವೃಷ್ಠಿಯಿಂದಾಗಿ ಮನೆ, ಆಸ್ತಿ, ಬೆಳೆ ಹಾನಿಯಾದವರಿಗೆ ಮತ್ತು ಮೀನುಗಾರಿಕಾ ಬೋಟು, ಬಲೆಗಳನ್ನು ಕಳೆದುಕೊಂಡವರಿಗೆ ತುರ್ತು ಪರಿಹಾರವನ್ನು ಈಗಾಗಲೇ ನೀಡಲಾಗಿದೆ. ಮೂರು ವರ್ಷಕ್ಕಾಗುವ ಮಳೆ ಒಂದೇ ಬಾರಿ ಸುರಿದ ಪರಿಣಾಮವಾಗಿ ರೈತರು ಬೆಳೆದ ಫಸಲು, ರಸ್ತೆಗಳು ಹಾನಿಯಾಗಿದೆ. ಪ್ರಾಕೃತಿಕ ವಿಕೋಪದಿಂದ ಬೈಂದೂರು ಕ್ಷೇತ್ರದಲ್ಲಿ ಮನೆ ಕಳೆದುಕೊಂಡವರಿಗೆ, ದೋಣಿ, ಮೀನಿನ ಬಲೆ ಹಾನಿಯಾದವರ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪದ ಅಡಿಯಲ್ಲಿ ಸುಮಾರು 50 ಲಕ್ಷಕ್ಕಿಂತ ಹೆಚ್ಚು ಅನುದಾನವನ್ನು ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಕೊಟ್ಟಿದ್ದೇವೆ. ತಾಂತ್ರಿಕ ದೋಷದಿಂದ ರೈತರ ಬೆಳೆ ಹಾನಿ ಪರಿಹಾರ ವಿತರಿಸಲಾಗಿರಲಿಲ್ಲ. ಪ್ರಸ್ತುತ ಸಮಸ್ಯೆ ಬಗೆಹರಿದಿದ್ದು ಪ್ರಾಕೃತಿಕ ವಿಕೋಪದಲ್ಲಿ ಕೃಷಿ ಬೆಳೆ ಹಾನಿಯಾದ 287 ಹೆಕ್ಟರ್ ಪ್ರದೇಶದ 349 ರೈತರ ಪ್ರಕರಣಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಅತೀ ಶೀಘ್ರದಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದರು.

ಬೈಂದೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಯ ಕೆಲಸಗಳು ಪ್ರಗತಿಯ ಹಂತದಲ್ಲಿದೆ. ಕ್ಲಸ್ಟರ್ -1 (ಪರ್ವತ ಶ್ರೇಣಿ) ಮತ್ತು ಕ್ಲಸ್ಟರ್ – 2 (ಸಮುದ್ರ ತೀರ ಪ್ರದೇಶಗಳ) ವ್ಯಾಪ್ತಿಯಲ್ಲಿ ಕ್ರಮವಾಗಿ ಹೊಸಂಗಡಿ ಮತ್ತು ಗುಲ್ವಾಡಿಯಲ್ಲಿ ನೀರನ್ನು ಎತ್ತಿ ಶುದ್ದೀಕರಿಸಿ 40 ಗ್ರಾಮ ಪಂಚಾಯತಿಗಳ ಹಾಗೂ ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ ಒಟ್ಟು 848 ಜನವಸತಿಗಳ ಸುಮಾರು 3 ಲಕ್ಷ ಜನರ ಮನೆ ಬಾಗಿಲಿಗೆ ನೀರು ತಲುಪಿಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಮರವಂತೆಯಲ್ಲಿ ಹೊರಬಂದರು ನಿರ್ಮಾಣ ಎರಡನೇ ಹಂತದ ಕಾಮಗಾರಿಗೆ ರೂ 85 ಕೋಟಿ ಮಂಜೂರಾಗಿದ್ದು ಟೆಂಡರ್ ಆಗಿದ್ದು ಅತೀ ಶೀಘ್ರದಲ್ಲಿ ಶಂಕುಸ್ಥಾಪನೆ ನಡೆಸಲಾಗುವುದು. ರೂ 218.00 ಕೋಟಿ ವೆಚ್ಚದಲ್ಲಿ ಬೈಂದೂರು-ರಾಣೇಬೆನ್ನೂರು ರಾ.ಹೆ 766(ಸಿ) ರಸ್ತೆಯಲ್ಲಿ ಕೊಲ್ಲೂರು ಪೇಟೆ ಪರಿಸರದ 2.8 ಕಿ.ಮೀ ವ್ಯಾಪ್ತಿಯ ಕಾಮಗಾರಿಗೆ ಟೆಂಡರ್ ನಡೆಸಲಾಗಿದೆ. ರೂ 15 ಕೋಟಿ ವೆಚ್ಚದಲ್ಲಿ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ ಹಾಗೂ ರೂ 3.48 ಕೋಟಿ ವೆಚ್ಚದಲ್ಲಿ ಹಳ್ಳಿಹೊಳೆ ಕಬ್ಬಿನಾಲೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.

ಪಿಪಿಪಿ ಮಾದರಿಯಲ್ಲಿ ರೂ 228.00 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೀ ಪ್ಲೇನ್, ಮರೀನಾ ಹಾಗೂ ಬಹುಪಯೋಗಿ ಬಂದರು ಯೋಜನೆ ಟೆಂಡರ್ ಹಂತದಲ್ಲಿದೆ. ರೂ 165.00 ಕೋಟಿ ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆ ಅನುಮೋದನೆ ಸಿಕ್ಕಿದೆ. ರೂ. 73.71 ಕೋಟಿ ವೆಚ್ಚದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೇ ರೂ. 35.00 ಕೋಟಿ ವೆಚ್ಚದಲ್ಲಿ ಸುಬ್ಬರಾಡಿ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು ಗೇಟ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ ಮಾದರಿ ವಿದ್ಯುತ್ ಗ್ರಾಮ ಯೋಜನೆ ಅಡಿಯಲ್ಲಿ ಕಿರಿಮಂಜೇಶ್ವರ ಗ್ರಾಮದಲ್ಲಿ ಸಮಗ್ರ ವಿದ್ಯುತ್ ನಿರ್ವಹಣೆ ಯೋಜನೆ ಅಂತಿಮ ಹಂತದಲ್ಲಿದೆ.

ರೂ 8.00 ಕೋಟಿ ವೆಚ್ಚದಲ್ಲಿ ತಹಶೀಲ್ದಾರ್, ಉಪನೊಂದಣಾಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ, ಉಪ ಖಜಾನೆ ಹಾಗೂ ಭೂ ನ್ಯಾಯ ಮಂಡಳಿ ಕಛೇರಿಗಳನ್ನು ಒಳಗೊಂಡ ಹೊಸ ತಾಲೂಕು ಆಡಳಿತ ಸೌಧ ಕಾಮಗಾರಿ ವೇಗವಾಗಿ ನೆಡೆಯುತ್ತಿದ್ದು ಶೀಘ್ರವಾಗಿ ಲೋಕಾರ್ಪಣೆಗೊಳ್ಳಲಿದೆ. ಹೊಸದಾಗಿ ಬೈಂದೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಅಗ್ನಿಶಾಮಕ ಠಾಣೆ ಕಾರ್ಯಾರಂಭವಾಗಿದೆ. 1.00 ಎಕ್ರೆ ಜಮೀನಿನಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಂ ಸುಕುಮಾರ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


Spread the love