
ಕಾಲೇಜು ಆವರಣದಲ್ಲಿ ಬೀದಿನಾಯಿಯನ್ನು ಹೊಡೆದು ಹತ್ಯೆ – ಇಬ್ಬರ ವಿರುದ್ದ ಪ್ರಕರಣ ದಾಖಲು
ಉಡುಪಿ: ಇಲ್ಲಿನ ಬಂಟಕಲ್ ನ ಶ್ರೀ ಮಧ್ವ ವಾದಿರಾಜ ಕಾಲೇಜು ಆವರಣದಲ್ಲಿ ಬೀದಿನಾಯಿಯೊಂದನ್ನು ಹೊಡೆದು ಕೊಂದ ಆರೋಪದಲ್ಲಿ ಕಾಲೇಜಿನ ಸಿಬ್ಬಂದಿ ವಿರುದ್ಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿನ ಗಾರ್ಡನ್ ಕೆಲಸ ಮಾಡುತ್ತಿರುವ ನಾಗರಾಜ್ ಮತ್ತು ವಾರ್ಡನ್ ರಾಜೇಶ್ ಎಂಬವರು ಸೇರಿ ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ. ಕಾಲೇಜಿನ ಆವರಣದ ಒಳಗಡೆಯಿದ್ದ ಬಿಳಿಬಣ್ಣದ ಬೀದಿನಾಯಿಯನ್ನು ಜ.27ರಂದು ಬೆಳಗ್ಗೆ ನಾಗರಾಜ್ ಕೋಲಿನಿಂದ ಹೊಡೆದು ಸಾಯಿಸಿದ್ದು, ಈ ದೃಶ್ಯಾವಳಿಯನ್ನು ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ವೀಡಿಯೋ ರೆಕಾರ್ಡ್ ಮಾಡಿ ಮೊಬೈಲ್ ಮೂಲಕ ಕಳುಹಿಸಿದ್ದಾರೆ ಎಂದು ಎಸ್.ಪಿ.ಸಿ.ಎ. ಪ್ರಾಣಿ ದಯಾ ಸಂಘದ ಸದಸ್ಯೆ, ಬಂಟಕಲ್ ಅರಸಿಕಟ್ಟೆ ನಿವಾಸಿ ಮಂಜುಳಾ ಕರ್ಕೇರ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಹೊಡೆದು ಸಾಯಿಸಿದ ನಾಯಿಯನ್ನು ಬಳಿಕ ಅವರು ಒಂದು ಗೋಣಿ ಚೀಲದಲ್ಲಿ ಎಳೆದುಕೊಂಡು ಬಂದು ಇನ್ನೊಂದು ಗೋಣಿ ಚೀಲದಲ್ಲಿ ಹಾಕುತ್ತಿ ರುವ ದೃಶ್ಯಾವಳಿ ಈ ವಿಡಿಯೋದಲ್ಲಿದೆ. ಆದುದರಿಂದ ನಾಯಿಯನ್ನು ಹೊಡೆದು ಸಾಯಿಸಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ