ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣಕ್ಕೆ , ಮೇಜರ್ ಟ್ವಿಸ್ಟ್ ; ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಸುಳ್ಳಿನ ಪ್ರಹಸನ!
ಬೆಳ್ತಂಗಡಿಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಲೇಜು ಓದುತ್ತಿದ್ದ ಅಪ್ರಾಪ್ತ ಯುವತಿಯ ಅಪಹರಣ ಯತ್ನ ಪ್ರಕರಣ ಪೊಲೀಸರ ತನಿಖೆಯಲ್ಲಿ ಠುಸ್ ಆಗಿದೆ. ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್ ನಲ್ಲಿ ಗೀಚಿಕೊಂಡು ಅಪಹರಣ ಪ್ರಹಸನದ ಕತೆ ಕಟ್ಟಿದ್ದಾಳೆಂದು ಪೊಲೀಸರು ಪತ್ತೆ ಮಾಡಿದ್ದಾರೆ.
ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಕೂಟರ್ ತಡೆದು ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳು ಸುದೆಮುಗೇರು ಎಂಬಲ್ಲಿ ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ, ಈ ವೇಳೆ ತನ್ನ ಕೈಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆಂದು ಯುವತಿ ದೂರಿದ್ದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಭಾರೀ ಸಂಚಲನ ಮೂಡಿಸಿದ್ದರಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಪೊಲೀಸರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಲ್ಲದೆ ಘಟನೆ ಬಗ್ಗೆ ಮಾಹಿತಿ ಪಡೆದಿದ್ದರು.
ಕಾರಿನ ನಂಬರ್ ಪ್ಲೇಟಿಗೆ ಬಟ್ಟೆ ಕಟ್ಟಿದ್ದರು, ಮುಖಕ್ಕೆ ಮುಸುಕು ಹಾಕಿದ್ದು ಮೂವರಿದ್ದರು, ಹಿಂದಿನಿಂದ ಬೈಕ್ ಬಂದಿದ್ದನ್ನು ನೋಡಿ ಕಾರಿನಲ್ಲಿದ್ದವರು ತನ್ನನ್ನು ಬಿಟ್ಟು ಎಸ್ಕೆಪ್ ಆಗಿದ್ದರೆಂದು ಯುವತಿ ತಿಳಿಸಿದ್ದಳು. ಇದರಂತೆ, ಪೊಲೀಸರು ಆಸುಪಾಸಿನಲ್ಲಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದರು. ಪೊಲೀಸರಿಗೆ ಸಾಂದರ್ಭಿಕ ಸಾಕ್ಷ್ಯಗಳು ಸಿಗದೇ ಇದ್ದುದರಿಂದ ವಿದ್ಯಾರ್ಥಿನಿಯನ್ನೇ ಹೆಚ್ಚುವರಿ ಮಾಹಿತಿ ಪಡೆಯಲು ಮುಂದಾಗಿದ್ದರು. ಕಾರಿನ ಬಣ್ಣ ಯಾವುದು, ಯಾವ ಕಾರು, ಹೇಗಿತ್ತು ಘಟನೆ ಕರೆಕ್ಟ್ ಆಗಿ ಎಲ್ಲಿ ಆಗಿರೋದು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಾಗ ಆಕೆ ತಬ್ಬಿಬ್ಬು ಆಗಿದ್ದಳು.
ಕೊನೆಗೆ, ಅಪಹರಣ ಘಟನೆಯೇ ಸುಳ್ಳು, ಬೇರೆ ಕಾಲೇಜು ಸೇರುವುದಕ್ಕಾಗಿ ಅಪಹರಣದ ಕತೆ ಕಟ್ಟಿದ್ದಾಗಿ ತಿಳಿಸಿದ್ದಾಳೆ. ಗ್ರಾಮೀಣ ಭಾಗದ ಕಾಲೇಜು ಬದಲು ಮಂಗಳೂರು ನಗರದ ಕಾಲೇಜಿಗೆ ಹೋಗಲು ಬಯಸಿದ್ದು ಅದಕ್ಕಾಗಿ ತಾನೇ ಬೇಡ್ ನಿಂದ ಕೈಯನ್ನು ಕೊಯ್ದುಕೊಂಡಿದ್ದಾಗಿ ತಿಳಿಸಿದ್ದಾಳೆ. ಇದಲ್ಲದೆ, ತನ್ನ ಮನೆಯ ಸಮೀಪವೇ ಪುಸ್ತಕಗಳನ್ನು ಸುಟ್ಟು ಹಾಕಿದ್ದಳು, ಇದರಂತೆ, ತನ್ನ ಬ್ಯಾಗನ್ನು ಅಪಹರಣಕ್ಕೆ ಬಂದಿದ್ದವರು ಹೊತ್ತೊಯ್ದಿದ್ದಾರೆ ಎಂದು ಕತೆ ಸೃಷ್ಟಿಸಿದ್ದಳು.
ಕೈ ಮೇಲಿನ ಗಾಯಗಳನ್ನು ನೋಡಿ ಮತ್ತು ಆಕೆಯ ಹೇಳಿಕೆಯಲ್ಲೇ ಅನುಮಾನಗೊಂಡಿದ್ದ ಪೊಲೀಸರು ಕೂಲಂಕುಷ ವಿಚಾರಣೆ ನಡೆಸಿದಾಗ ಸತ್ಯ ಬಿಚ್ಚಿಟ್ಟಿದ್ದಾಳೆ. ವಿಚಾರಣೆ ಸಂದರ್ಭ ಅಪ್ರಾಪ್ತ ವಿದ್ಯಾರ್ಥಿನಿ ಸುಳ್ಳು ಕತೆ ಹೇಳಿದ್ದನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ. ಇದರೊಂದಿಗೆ, ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ.
ಬೈಟ್ , ಜಿತೇಂದ್ರ ಕುಂದೇಶ್ವರ .ಹಿರಿಯ ವರದಿಗಾರರು ಕ್ರೈಂ
