ಕಾವೂರು| ಜಾತಿ–ಧರ್ಮ ನಿಂದನೆ ಮಾಡಿ ಹಲ್ಲೆ ನಡೆಸಿ ಕೊಲೆ ಯತ್ನ: ಮೂವರ ಬಂಧನ
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ತಡೆದು ನಿಲ್ಲಿಸಿ ಜಾತಿ–ಧರ್ಮ ನಿಂದನೆ ಮಾಡಿ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ 11-01-2026ರಂದು ಸಂಜೆ ಸುಮಾರು 6.05ರ ವೇಳೆಗೆ ನಾಲ್ವರು ಆರೋಪಿಗಳು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಧರ್ಮ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾರಣೆ ಮಾಡುವ ಕರಣಿ (ತಾಪಿ) ಯಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ದಿನಾಂಕ 12-01-2026ರಂದು ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 03/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 126(2), 352, 351(3), 353, 109, 118(1) ಹಾಗೂ 3(5)ರಡಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳನ್ನು ಕೂಳೂರು ಜೋಗಿ ಕಂಪೌಂಡ್ ನಿವಾಸಿ ರತೀಶ್ ದಾಸ್ (32), ಧನುಷ್ (24) ಮತ್ತು ಸಾಗರ್ (24) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ತನಿಖೆಯನ್ನು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ಅವರ ನೇತೃತ್ವದಲ್ಲಿ ನಡೆಸಲಾಗಿದೆ. ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನ ಬಿರಾದಾರ್, ಎಎಸ್ಐ ಚಂದ್ರಹಾಸ್, ಹೆಚ್ಸಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ರಿಯಾಜ್, ನಾಗರಾಜ್ ಮತ್ತು ಹನುಮಂತ ಅವರ ತಂಡ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
