
ಕಾವೇರಿ ಅಸೋಸಿಯೇಷನ್ ನಿಂದ ಅರುಣ್ ಮಾಚಯ್ಯಗೆ ಸನ್ಮಾನ
ಮಡಿಕೇರಿ: ಮಾಯಮುಡಿ ಕೋಲುಬಾಣೆಯ ಕಾವೇರಿ ಅಸೋಸಿಯೇಷನ್ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ನಡೆದ ಕ್ರೀಡಾಕೂಟ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿ ಭಾರತ ತಂಡವನ್ನು ಮುನ್ನಡೆಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರು ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೆಚ್ಚಾಗಲಿದೆ ಎಂದರು. ಆರೋಗ್ಯ ವೃದ್ಧಿ ಹಾಗೂ ಶಿಸ್ತಿನ ಜೀವನಕ್ಕೆ ಕ್ರೀಡೆ ಸಹಕಾರಿಯಾಗಿದ್ದು, ಕೊಡಗಿನ ಮೂಲ ಸಂಸ್ಕೃತಿಯೊಂದಿಗೆ ಕ್ರೀಡಾಕೂಟಗಳು ಕೂಡ ಉನ್ನತ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವೆಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ತೆಂಗಿನ ಕಾಯಿಗೆ ಗುಂಡುಹೊಡೆಯುವ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ನಾಮೇರ ಕೆ.ರವಿ ದೇವಯ್ಯ ಪ್ರಥಮ, ಆಪಟ್ಟೀರ ಆರ್.ಆದರ್ಶ್ ಅಯ್ಯಪ್ಪ ದ್ವಿತೀಯ ಹಾಗೂ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ತೃತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಎಸ್.ಎಂ.ಚಂದ್ರಿಕ ಮಂಜುನಾಥ್ ಪ್ರಥಮ, ಎಸ್.ಎಂ.ಪ್ರೇಕ್ಷ ದ್ವಿತೀಯ ಹಾಗೂ ಕಾಳಪಂಡ ಬಿ.ಲತಾ ಬಿದ್ದಪ್ಪ ತೃತೀಯ ಬಹುಮಾನ ಪಡೆದರು.
ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಸ್.ಎನ್.ಸುಕೇಶ್, ಉಪಾಧ್ಯಕ್ಷ ನಾಮೇರ ರವಿ ದೇವಯ್ಯ, ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಕ್ರೀಡಾ ಕಾರ್ಯದರ್ಶಿ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ, ನಿರ್ದೇಶಕ ಆಪಟ್ಟೀರ ಎ.ಬೋಪಣ್ಣ, ಎಸ್.ವಿ.ಮಂಜುನಾಥ್, ಜೆ.ಎಸ್.ಲೋಕೇಶ್, ಬಿ.ಎನ್.ಪ್ರತ್ಯು, ಖಜಾಂಚಿ ಕಾಳಪಂಡ ಸಿ.ನರೇಂದ್ರ ಹಾಗೂ ಸದಸ್ಯರು ಉಪಸ್ಥಿತರಿದ್ದರು.