ಕಿಡಿಗೇಡಿಗಳ ಕೃತ್ಯಕ್ಕೆ ಭತ್ತದ ಮೆದೆ ಬೆಂಕಿಗಾಹುತಿ

Spread the love

ಕಿಡಿಗೇಡಿಗಳ ಕೃತ್ಯಕ್ಕೆ ಭತ್ತದ ಮೆದೆ ಬೆಂಕಿಗಾಹುತಿ

ಕೆ.ಆರ್.ಪೇಟೆ: ಬಡ ರೈತನೊಬ್ಬ ಐದು ತಿಂಗಳ ಕಾಲ ಕಷ್ಟಪಟ್ಟು ಬೆಳೆದ ಭತ್ತ ಮೆದೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದ ನರಸೇಗೌಡರ ಪುತ್ರ ಚಂದ್ರೇಗೌಡ ಎಂಬುವವರು ತಮಗೆ ಸೇರಿದ ಅಕ್ಕಿಹೆಬ್ಬಾಳು ಗ್ರಾಮದ ಸರ್ವೇ ನಂಬರ್ 100 ಮತ್ತು 101ರಲ್ಲಿನ ಒಂದೂವರೆ ಎಕರೆಯಲ್ಲಿ ಭತ್ತ ಕಟಾವು ಮಾಡಿ ತೆನೆ ಸಹಿತ ಭತ್ತದ ಹುಲ್ಲನ್ನು ತಮ್ಮ ಗ್ರಾಮದ ಪಕ್ಕದಲ್ಲಿ ಮೆದೆ ಹಾಕಿದ್ದರು. 2ರಿಂದ3 ದಿನದಲ್ಲಿ ಭತ್ತ ಬಿಡಿಸಲು  ಏರ್ಪಾಡು ಮಾಡಿಕೊಂಡಿದ್ದರು. ಆದರೆ ಸೋಮವಾರ ಸಂಜೆಯ ವೇಳೆಗೆ ಯಾರೋ ಕಿಡಿಗೇಡಿಗಳು ಬೀಡಿಸೇದಿ  ಬೀಡಿಯ ತುಂಡನ್ನು ಎಸೆದಿದ್ದಾರೆ. ಅದು ಸಮೀಪದಲ್ಲಿ ಒಟ್ಟಿದ್ದ ಭತ್ತದ ಮೆದೆಗೆ ಹೊತ್ತಿಕೊಂಡು ಉರಿಯಲಾರಂಭಿಸಿದೆ.  ಕೂಡಲೇ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿದರೂ ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಭತ್ತ ಮತ್ತು ಹುಲ್ಲು ಸಂಪೂರ್ಣವಾಗಿ ಸುಟ್ಟು ನಾಶವಾಗಿತ್ತು.

ಬಡ ರೈತ ಚಂದ್ರೇಗೌಡ ಮತ್ತು ಕುಟುಂಬದವರು ತಮಗಿದ್ದ ಜಮೀನಿನಲ್ಲಿ ಐದು ತಿಂಗಳಿನಿಂದ ಭತ್ತವನ್ನು ಪೋಷಣೆ ಮಾಡಿ, ನಾಟಿ ಮಾಡಿ, ಕಳೆತೆಗೆದು, ಭತ್ತ ಕಟಾವು ಮಾಡಿಸಿ ಸೇರಿದಂತೆ 25,000ಕ್ಕೂ ಹೆಚ್ಚು ಖರ್ಚು ಮಾಡಿದ್ದರು. ಆದರೆ ದಾರಿಹೋಕರ ಅಥವಾ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಬಡ ಕುಟುಂಬ ಬೀದಿಗೆ ಬೀಳುವಂತಾಗಿದೆ. ತಾಲ್ಲೂಕು ಆಡಳಿತ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು  ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಮಗೆ ಆಗಿರುವ ನಷ್ಟವನ್ನು ಭರಿಸಿಕೊಡಬೇಕೆಂದು ರೈತ ಚಂದ್ರೇಗೌಡ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.


Spread the love