ಕಿನ್ನಿಗೋಳಿ ಚರ್ಚಿನ ಪ್ರಧಾನ ಧರ್ಮಗುರು  ವಂ| ಮ್ಯಾಥ್ಯು ವಾಸ್‌ ನಿಧನ

Spread the love

‘ಭುವನ ಜ್ಯೋತಿ’ ಚಿತ್ರದ ಖ್ಯಾತ ನಿರ್ಮಾಪಕ ಫಾ. ಮ್ಯಾಥ್ಯೂ ವಾಸ್ ಇನ್ನಿಲ್ಲ

ವರದಿ: ಫಾ ಅನಿಲ್ ಫೆರ್ನಾಂಡಿಸ್

ಮಂಗಳೂರು: ಯೇಸು ಕ್ರಿಸ್ತನ ಜೀವನದ ಕುರಿತು ಕನ್ನಡ ಮತ್ತು ಭಾರತದಲ್ಲಿ ಮೊಟ್ಟಮೊದಲ ಸಂಗೀತ ಚಲನಚಿತ್ರವಾದ ‘ಭುವನ ಜ್ಯೋತಿ’ಯ ಅತ್ಯಂತ ಮೆಚ್ಚುಗೆ ಪಡೆದ ನಿರ್ಮಾಪಕ ರೆ. ಫಾ. ಮ್ಯಾಥ್ಯೂ ವಾಸ್, ಅಕ್ಟೋಬರ್ 22, 2021 ರಂದು ಶುಕ್ರವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರು ಸಾಯುವಾಗ ಅವರಿಗೆ 62 ವರ್ಷ. ಪ್ರಸ್ತುತ, ಅವರು ಮಂಗಳೂರಿನ ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕನ್ಸೆಪ್ಶನ್ ಚರ್ಚ್‍ನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಮ್ಯಾಥ್ಯೂ ವಾಸ್ ಅವರ ಪಾರ್ಥಿವ ಶರೀರವನ್ನು ನಾಳೆ ಅಕ್ಟೋಬರ್ 23 ರ ಶನಿವಾರ ಬೆಳಿಗ್ಗೆ 8.30 ರಿಂದ 9.30ರ ತನಕ ಸಾರ್ವಜನಿಕ ದರ್ಶನಕ್ಕಾಗಿ ಕಿನ್ನಿಗೋಳಿ ಚರ್ಚ್‍ಗೆ ತರಲಾಗುತ್ತದೆ. ದಿವಂಗತ ಪೂಜ್ಯನೀಯರ ಅಂತ್ಯಕ್ರಿಯೆ ಪೂಜೆ ಮತ್ತು ಅಂತ್ಯಕ್ರಿಯೆ ವಿಧಿಗಳನ್ನು ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕನ್ಸೆಪ್ಶನ್ ಚರ್ಚ್‍ನಲ್ಲಿ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ.

ರೆ. ಫಾ. ಮ್ಯಾಥ್ಯೂ ವಾಸ್ ಬಂಟ್ವಾಳದ ಸಿದ್ದಕಟ್ಟೆಯಲ್ಲಿ ಜುಲೈ 8, 1960 ರಂದು ಶ್ರೀ ಜಾನ್ ವಾಸ್ ಮತ್ತು ಲೂಸಿ ರೊಡ್ರಿಗಸ್ ಅವರಿಗೆ ಜನಿಸಿದರು. ಅವರು ಏಪ್ರಿಲ್ 30, 1987 ರಂದು ಗುರು ದೀಕ್ಷೆ ಪಡೆದರು. ಮಂಗಳೂರು ಧರ್ಮಪ್ರಾಂತ್ಯದ ಕಿನ್ನಿಗೋಳಿ ಮತ್ತು ಕುಲಶೇಖರ್ ಚರ್ಚ್‍ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ನಂತರ, ಅವರು ಪಾಟ್ನಾದಲ್ಲಿ ಸಮೂಹ ಸಂವಹನದಲ್ಲಿ ತರಬೇತಿ ಪಡೆದರು.

ವಂದನೀಯ ಮ್ಯಾಥ್ಯೂ ವಾಸ್ ಅವರು ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಸಂವಹನದಲ್ಲಿ ಆಸಕ್ತಿ ಹೊಂದಿದ್ದರು. ಆದ್ದರಿಂದ, ಅವರು ತೈವಾನ್‍ನಲ್ಲಿ ಚಲನಚಿತ್ರ ನಿರ್ಮಾಣದಲ್ಲಿ ಅಧ್ಯಯನ ಮಾಡಿದರು. ಕೆನರಾ ಸಂಪರ್ಕ ಕೇಂದ್ರದ (ಸಿಸಿಸಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸುವಾಗ ಅವರು ಚಲನಚಿತ್ರ ನಿರ್ಮಾಣಕ್ಕೆ ಮುಂದಾದರು. ‘ನಾದವೈಭವಂ’ ನಿರ್ಮಾಣದ ಉಡುಪಿ ವಾಸುದೇವ ಭಟ್ ನಿರ್ದೇಶನದ ‘ಭುವನ ಜ್ಯೋತಿ’ (ಜೀಸಸ್, ವಿಶ್ವದ ಬೆಳಕು)ಯು, ಯೇಸುಕ್ರಿಸ್ತನ ಜೀವನದ ಕುರಿತು ಕನ್ನಡದ ಮೊಟ್ಟಮೊದಲ ಸಂಗೀತ ಚಿತ್ರ. ಇದು ಕ್ರಿಸ್ತನ ಜೀವನವನ್ನು ಕರ್ನಾಟಿಕ್ ಸಂಗೀತ, ಹಾಡುಗಳು ಮತ್ತು ನೃತ್ಯದ ಮೂಲಕ ಬಿಂಬಿಸುವ 35 ಎಂಎಂ ಚಿತ್ರವಾಗಿದ್ದು, ಇದು ದಕ್ಷಿಣ ಕನ್ನಡದ ಜನರನ್ನು ಆಕರ್ಷಿಸಿತು ಮತ್ತು ಇತರ ಭಾμÉಗಳಿಗೆ ಡಬ್ ಮಾಡಲಾಯಿತು.

ವಂದನೀಯ ಮ್ಯಾಥ್ಯೂ ವಾಸ್, ಮಂಗಳೂರು ಧರ್ಮಪ್ರಾಂತ್ಯದ ಕೆನರಾ ಸಂವಹನ ಕೇಂದ್ರದ (1991-1998) 4 ನೇ ನಿರ್ದೇಶಕರಾಗಿ, ನಿಸ್ವಾರ್ಥವಾಗಿ ಕೇಂದ್ರ ಮತ್ತು ಧರ್ಮಪ್ರಾಂತ್ಯಕ್ಕೆ ಸೇವೆ ಸಲ್ಲಿಸಿದ್ದಾರೆ, ಮಾಧ್ಯಮದ ಮೂಲಕ ಸುವಾರ್ತ ಪ್ರಸಾರ, ಧರ್ಮಪ್ರಚಾರ, ಸಾಮಾಜಿಕ ಸಂಪರ್ಕ ಮತ್ತು ಆಂತರ್ ಧಾರ್ಮೀಯ ಸಂವಾದದ ಕೆಲಸಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಫಾ. ಮ್ಯಾಥ್ಯೂ ವಾಸ್ ಬೇಳಾ (1998), ಉಡುಪಿ (2004), ಆಂಜೆಲೂರು (2011) ಮತ್ತು ಕಿನ್ನಿಗೋಳಿ (2018 ರಿಂದ) ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. ಅವರ ಪ್ರೀತಿ, ವಾತ್ಸಲ್ಯ, ಸ್ನೇಹಪರತೆ ಮತ್ತು ಸರಳತೆಯಿಂದ ಎಲ್ಲರ ಮನ ಗೆದ್ದವರು.

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಪ್ರಸ್ತುತ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ವಂದನೀಯ ಮ್ಯಾಥ್ಯೂ ವಾಸ್ ಎಲ್ಲರಿಗೂ ನಲ್ಮೆಯ ಮಾರ್ಗದರ್ಶಕರಾಗಿ, ನಿರಂತರ ಚೇತನ ಚಿಲುಮೆಯಾಗಿದ್ದರು. ಮಂಗಳೂರಿನ ಬಿಷಪ್ ಆತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು, ಮಂಗಳೂರು ಧರ್ಮಸಭೆಯ ಸಮಸ್ತ ಯಾಜಕ ವೃಂದ, ಧರ್ಮಭಗಿನಿ ಹಾಗೂ ಶ್ರೀ ಸಾಮಾನ್ಯ ವಿಶ್ವಸಿಗಳ ಪರವಾಗಿ ಆಕಾಲಿಕವಾಗಿ ಆಗಲಿದ ಪೂಜ್ಯನೀಯರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ. ದುಃಖಿತ ಕುಟುಂಬಸ್ಥರಿಗೆ ಹಾಗೂ ಸಂಬಂಧಿಕರಿಗೆಗೆ ಸಾಂತ್ವನವನ್ನು ಸೂಚಿಸಿದ್ದಾರೆ ಎಂದು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಆಧಿಕಾರಿ ಶ್ರೀ ರೋಯ್ ಕ್ಯಾಸ್ತೆಲಿನೊ ಹೇಳಿದ್ದಾರೆ.

ಅವರ ಅಂತಿಮ ಸಂಸ್ಕಾರ ಶನಿವಾರ ಅಕ್ಟೋಬರ್‌ 23 ರಂದು ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿ ಇಮ್ಯಾಕುಲೇಟ್‌ ಕನ್ಸಪ್ಸನ್‌ ಚರ್ಚಿನಲ್ಲಿ ನಡೆಯಲಿದೆ ಎಂದು ಧರ್ಮಪ್ರಾಂತ್ಯದ ಪ್ರಕಟಣೆ ತಿಳಿಸಿದೆ.


Spread the love

1 Comment

  1. Condolences
    We have lost a laity oriented, friendly, compassionate, spiritual mentor.
    May his soul rest in peace and his ideals continue to guide our thoughts and actions

Comments are closed.