
ಕುಂದಗನ್ನಡಿಗರ ಪ್ರೀತಿ, ಗೌರವಕ್ಕೆ ಆಭಾರಿ: ಮೈಸೂರು ಒಡೆಯರ್ ಮೆಚ್ಚುಗೆ
ಕುಂದಾಪುರ: ಕುಂದಾಪುರಕ್ಕೆ ಇದು ನನ್ನ ಮೊದಲ ಭೇಟಿ. ರಾಜ್ಯದ ಎಲ್ಲ ಕಡೆಯಂತೆ ಇಲ್ಲಿಗೆ ಬಂದಾಗಲೂ ಒಳ್ಳೆಯ ಸ್ವಾಗತ ಸಿಕ್ಕಿದೆ. ಇಲ್ಲಿನ ಜನರ ಪ್ರೀತಿ, ಗೌರವಕ್ಕೆ ಆಭಾರಿ. ಕುಂದಾಪುರ ಸ್ವಚ್ಛ, ಸುಂದರ ಊರು. ಇಲ್ಲಿನ ನಗರ, ಬೀಚ್ ಸಹ ಬೇರೆ ಕಡೆಗಳಿಗಿಂತ ಸ್ವಚ್ಛವಾಗಿದೆ ಎಂದು ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡವು ‘ಸಾಗರದ ಸ್ವಚ್ಛತೆ ಮತ್ತು ಸಾಗರದಲ್ಲಿನ ಜೈವಿಕ ವ್ಯವಸ್ಥೆಯ ಸಂರಕ್ಷಣೆ’ಯ ಧ್ಯೇಯದೊಂದಿಗೆ ಆರಂಭಿಸಿದ ಬೀಚ್ ಸ್ವಚ್ಛತಾ ಕಾರ್ಯವು ನಿರಂತರ 130 ವಾರಗಳನ್ನು ಪೂರೈಸಿದ್ದು, ಶನಿವಾರ ನಡೆದ 131 ವಾರದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಮೆಹಬ್ಬ, ಬೀಚ್ ಸ್ವಚ್ಛತೆಯನ್ನು ಅದ್ಧೂರಿಯಾಗಿ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಸಮುದ್ರ ಜೀವಿಯ ರಕ್ಷಣೆಯ ಜೊತೆಗೆ ಮೀನಿನ ಸಂತತಿ ಉಳಿವಿಗೆ ಅಗತ್ಯವಿದೆ ಎಂದರು.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಎಫ್ಎಸ್ಎಲ್ ಇಂಡಿಯಾ, ರೀಫಾ ವಾಚ್, ಅರಣ್ಯ ಇಲಾಖೆ, ಕರಾವಳಿ ಕಾವಲು ಪಡೆ, ಪೊಲೀಸ್ ಇಲಾಖೆ, ರೆಡ್ಕ್ರಾಸ್, ರೋಟರಿ, ಲಯನ್ಸ್ ಕ್ಲಬ್, ಎಂಐಟಿ ಮೂಡ್ಲಕಟ್ಟೆ, ಮಾಹೆ ಮಣಿಪಾಲ, ಉಡುಪಿ ಸ್ವಚ್ಛ ಸಮುದ್ರ ತಂಡ, ಕಾರ್ಕಳ ಬ್ರಿಗೇಡ್, ಪಂಚವರ್ಣ ಯುವಕ ಮಂಡಲ ಕೋಟ, ಗೀತಾನಂದ ಫೌಂಡೇಶನ್, ಮತ್ತಿತರ ಸಂಘಟನೆಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಇದೇ ಮೊದಲ ಬಾರಿಗೆ ಕುಂದಾಪುರಕ್ಕೆ ಆಗಮಿಸಿದ ಮೈಸೂರಿನ ಮಹಾರಾಜರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಕೋಡಿಯ ಶ್ರೀ ಚಕ್ರೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಸಾಂಪ್ರದಾಯಿಕ ಶೈಲಿಯ ಮೆರವಣಿಗೆ ಮೂಲಕ ಕೋಡಿಯ ಕಡಲ ಕಿನಾರೆಗೆ ಆಗಮಿಸಿದರು.