ಕುಂದಾಪುರದಲ್ಲಿ ಐದು ಸಾವಿರ ಮಂದಿಯಿಂದ ಮೊಳಗಿದ ಕೋಟಿ ಕಂಠ ಗಾಯನ

Spread the love

ಕುಂದಾಪುರದಲ್ಲಿ ಐದು ಸಾವಿರ ಮಂದಿಯಿಂದ ಮೊಳಗಿದ ಕೋಟಿ ಕಂಠ ಗಾಯನ

ಕುಂದಾಪುರ: 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನವು ತಾಲೂಕು ಆಡಳಿತದ ವತಿಯಿಂದ ಗಾಂಧಿ ಮೈದಾನದಲ್ಲಿ ಶುಕ್ರವಾರ 5 ಸಾವಿರ ಮಂದಿಯಿಂದ ಕನ್ನಡದ ಆರು ಹಾಡುಗಳು ಮೊಳಗಿದವು.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಅವರು ಸಂಕಲ್ಪ ವಿಧಿ ಬೋಧನೆ ಮಾಡುವ ಮೂಲಕ ಗಾಯನಕ್ಕೆ ಚಾಲನೆ ನೀಡಿದರು.

ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಹುಯಿಲಗೊಳ ನಾರಾಯಣರಾವ್ ಅವರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಚೆನ್ನವೀರ ಕಣವಿ ರಚನೆಯ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ, ಡಾ| ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ ಹಾಗೂ ಹಂಸಲೇಖ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ನೆರೆದವರು ಹಾಡಿದರು.

ಕನ್ನಡ ನಾಡಿನ ಪ್ರಜೆಯಾಗಿ ನಾನು ನನ್ನ ನಾಡು, ನಾಡಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ, ಕನ್ನಡದಲ್ಲೇ ಬರೆಯುತ್ತೇನೆ, ಕನ್ನಡ ಬಳಸುತ್ತೇನೆ ಎಂಬ ಪಣತೊಡುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ. ಕನ್ನಡ ನಾಡಿನಲ್ಲಿರುವ ಕನ್ನಡೇತರ ಬಂಧುಗಳಿಗೆ ಕನ್ನಡ ಕಲಿಸುತ್ತೇನೆ ಎನ್ನುವುದಾಗಿ ಎಸಿಯವರು ಸಂಕಲ್ಪ ಬೋಧಿಸಿದರು.

ಕುಂದಾಪುರದ ಕಂದಾಯ ಇಲಾಖೆ ಅಧಿಕಾರಿಗಳು, ಪೆÇಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ, ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜು, ಸರಕಾರಿ ಪ.ಪೂ. ಕಾಲೇಜು, ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದದವರು, ಶಿಕ್ಷಕರು, ನಾಗರೀಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಾಯಕ ಗಣೇಶ್ ಗಂಗೊಳ್ಳಿ ನೇತೃತ್ವದಲ್ಲಿ ಗಾಯನ ನೆರವೇರಿತು.

ಈ ಸಂದರ್ಭದಲ್ಲಿ ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಯುವ ಸಬಲೀಕರಣ, ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ಕುಸುಮಾಕರ ಶೆಟ್ಟಿ, ಕುಂದಾಪುರ ಡಿವೈಎಸ್‍ಪಿ ಕೆ. ಶ್ರೀಕಾಂತ್, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಕಲಾಕ್ಷೇತ್ರ ಕುಂದಾಪುರದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಮತ್ತಿತರರು ಪಾಲ್ಗೊಂಡಿದ್ದರು.

ಬಿಸಿಲ ತಾಪ: ವಿದ್ಯಾರ್ಥಿಗಳಿ ಅಸ್ವಸ್ಥ:
ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಯ ಬಳಿಕ ಕಾರ್ಯಕ್ರಮ ಆರಂಭವಾಗಿದ್ದು, ಈ ಸಮಯದಲ್ಲಿ ಮೈದಾನದಲ್ಲಿ ಬಿಸಿಲ ತಾಪ ಹೆಚ್ಚಾಗಿತ್ತು. ಗಾಯನ ಹಾಡಲೆಂದು ಸಾಲಾಗಿ ನಿಂತಿದ್ದ ವಿದ್ಯಾರ್ಥಿಗಳಲ್ಲಿ 12 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡರು. ಕೆಲವರು ಕುಸಿದು ಬಿದ್ದ ಘಟನೆ ಪ್ರಸಂಗವೂ ನಡೆಯಿತು. ಕೂಡಲೇ ಅವರನ್ನು ಸಮೀಪಕ್ಕೆ ಕರೆದುಕೊಂಡು ಬಂದು ಉಪಚರಿಸಿದ ಬಳಿಕ ಆಂಬುಲೆನ್ಸ್ ಹಾಗೂ ಇತರೆ ವಾಹನಗಳಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಬಳಿಕ ಮನೆಗೆ ಕಳುಹಿಸಲಾಯಿತು.


Spread the love