ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

Spread the love

ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಕುಂದಾಪುರ: ಜಾತಿ- ಮತ – ಪಂಥ ಪ್ರದೇಶಗಳ ಎಲ್ಲೆ ಮೀರಿ ಎಲ್ಲ ಭಾಷೆಗಳನ್ನು ಪ್ರೀತಿಸುವ, ನಮ್ಮ ಭಾಷೆಯನ್ನು ರಕ್ಷಿಸುವ, ಜಾಗತೀಕರಣದ ಅನಿವಾರ್ಯತೆಯ ನಡುವೆ ‘ನಮ್ಮತನ’ವನ್ನು ಉಳಿಸಿಕೊಳ್ಳುವ ಅಗತ್ಯತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ಜಗತ್ತನ್ನು ಅರಿಯುವ ಜತೆಗೆ ಜನಪದ, ಜಾನಪದವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಹೇಳಿದರು.

ಅವರು ರವಿವಾರ ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಪ್ರಾದೇಶಿಕ ವೈವಿಧ್ಯತೆ, ಭಾಷಾ ಸೊಗಡು, ಸಂಸ್ಕೃತಿ, ಪರಂಪರೆ, ಆಹಾರ, ಆಚರಣೆಗಳಲ್ಲಿ ವಿವಿಧತೆಯಿದ್ದರೂ ನಮ್ಮೆಲ್ಲರ ಹದಯ ಭಾಷೆ ಒಂದೇ ಅದು ಕನ್ನಡ. ಎಲ್ಲ ಕ್ಷೇತ್ರಗಳಲ್ಲಿಯೂ ಕರುನಾಡಿನ ಸಾಧನೆ ವಿಶಿಷ್ಟವಾಗಿದ್ದು, ನಡೆ- ನುಡಿ- ಆಚರಣೆ- ಆಡಳಿತದಲ್ಲಿ ಕನ್ನಡತನವನ್ನು ಬಳಸುವುದು ತಾಯಿ ನುಡಿಯ ಮಹತ್ತರ ಸೇವೆಯಾಗಿದೆ ಎನ್ನುವುದಾಗಿ ಅವರು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ ಮಾತನಾಡಿ, ಕನ್ನಡ ನಾಡು- ನುಡಿಗಾಗಿ ಸೇವೆ ಸಲ್ಲಿಸಿದ, ಕರುನಾಡ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ನೆನೆಯುವುದರ ಜತೆಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದು, ನಮ್ಮ ಕೀರ್ತಿ ಪತಾಕೆಯನ್ನು ಎತ್ತರಕ್ಕೇರಿಸಿದ ಸಾಧಕರನ್ನು ಗುರುತಿಸಿ, ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್ ವಿ., ಶ್ರೀಧರ ಶೇರೆಗಾರ್, ಯುವಜನ ಸೇವಾ ಮತ್ತು ಕ್ರೀಡಾಽಕಾರಿ ಕುಸುಮಾಕರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೆಕರ್, ಮತ್ತಿತರ ತಾಲೂಕು ಮಟ್ಟದ ಅಽಕಾರಿಗಳು, ಇಲಾಖಾ ಸಿಬಂದಿ, ಜನಪ್ರತಿನಿಧಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಫಥಸಂಚಲನವಿರಲಿಲ್ಲ. ಕುಂದಾಪುರ ನಗರ ಠಾಣಾಧಿಕಾರಿ ಸದಾಶಿವ ಗವರೋಜಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ಪಡೆಯಿಂದ ಧ್ವಜವಂದನೆ ಮಾತ್ರ ನಡೆಸಲಾಯಿತು.

ಲ್ಯಾಪ್ಟಾಪ್ ವಿತರಣೆ:
ಕನ್ನಡ ಮಾಧ್ಯಮದಲ್ಲಿ ಉತ್ತಮ ಸಾಧನೆಗೈದ ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಧನ್ಯಶ್ರೀ ಶೆಟ್ಟಿ, ಪ್ರಶಾಂತ್ ಹಾಗೂ ಕುಂದಾಪುರ ಬೋರ್ಡ್ ಹೈಸ್ಕೂಲಿನ ಪನ್ನಗ ಮಯ್ಯ ಅವರಿಗೆ ಲ್ಯಾಪ್ಟಾಪ್ ನೀಡಿ ಗೌರವಿಸಲಾಯಿತು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೇಶವ್ ಶೆಟ್ಟಿಗಾರ್ ವಂದಿಸಿದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.


Spread the love