ಕುಂದಾ’ಪುರಸಭೆ’ ಸಾಮಾನ್ಯ ಸಭೆ: ಅಪಾಯಕಾರಿ ಕಟ್ಟಡಗಳ ತೆರವಿಗೆ ಆಗ್ರಹ

Spread the love

ಕುಂದಾ’ಪುರಸಭೆ’ ಸಾಮಾನ್ಯ ಸಭೆ: ಅಪಾಯಕಾರಿ ಕಟ್ಟಡಗಳ ತೆರವಿಗೆ ಆಗ್ರಹ

ಕುಂದಾಪುರ: ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಯ ಆಸು-ಪಾಸಿನಲ್ಲಿ ಹಳೆಯ ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಕಟ್ಟಗಳಿಂದ ಏನಾದರೂ ಅನಾಹುತಗಳು ಸಂಭವಿಸಿದರೆ ಸಾರ್ವಜನಿಕರು ಪುರಸಭೆಯನ್ನು ದೂರುತ್ತಾರೆ. ಹೀಗಾಗಿ ಸಂಬಂಧಪಟ್ಟವರಿಗೆ ಅಪಾಯಕಾರಿ ಕಟ್ಟಡಗಳನ್ನು ತೆರವುಗೊಳಿಸಲು ನೋಟೀಸ್ ನೀಡಬೇಕು ಎಂದು ಸದಸ್ಯ ಚಂದ್ರಶೇಖರ್ ಖಾರ್ವಿ ಆಗ್ರಹಿಸಿದರು.

ಪುರಸಭೆಯ ವಿಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪುರಸಭಾ ವ್ಯಾಪ್ತಿಯಲ್ಲಿನ ಹಳೆಯ ಕಟ್ಟಡವೊಂಡರ ತೆರವಿಗೆ ಸಾರ್ವಜನಿಕರಿಂದ ಪುರಸಭೆಗೆ ದೂರು ಬಂದಿದೆ. ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಎಲ್ಲೆಲ್ಲಿ ಅಪಾಯಕಾರಿ ಕಟ್ಟಡಗಳಿವೆಯೋ ಅವೆಲ್ಲವನ್ನೂ ಪರಿಶೀಲಿಸಿ ಪುರಸಭೆ ಕಾಯ್ದೆಯನ್ವಯ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ರಸ್ತೆಗಳು ಹೊಂಡ-ಗುಂಡಿ:
ಯುಜಿಡಿ, ಜಲಸಿರಿ ಯೋಜನೆಗಳಿಂದ ಪುರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳು ಹೊಂಡ-ಗುಂಡಿಯಾಗಿದ್ದು, ಸವಾರರು ಸಂಕಷ್ಟಪಡುತ್ತಿದ್ದಾರೆ. ಚಿಕನ್‍ಸಾಲ್ ರಸ್ತೆಯೂ ಸೇರಿದಂತೆ ಅನೇಕ ಭಾಗಗಳಲ್ಲಿ ಇತ್ತೀಚೆಗೆ ನಡೆದ ತೇಪೆ ಕಾಮಗಾರಿ ಒಂದೇ ದಿನದಲ್ಲಿ ಕಿತ್ತು ಹೋಗಿದೆ ಎಂದು ಸದಸ್ಯರಾದ ಸಂತೋಷ್ ಶೆಟ್ಟಿ, ಶ್ರೀಧರ್ ಶೇರುಗಾರ್, ಅಶ್ವಿನ್ ಪ್ರದೀಪ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಹೆಚ್ಚು ಮಳೆ ಸುರಿದ ಹಿನ್ನೆಲೆ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದೆ. ಸವಾರರಿಗೆ ಅನುಕೂಲವಾಗಲು ತುರ್ತು ಕಾಮಗಾರಿ ನಡೆಸಿದ್ದೇವೆ. ಇನ್ನು ಹದಿನೈದು ದಿನದೊಳಗೆ ಪೂರ್ಣಪ್ರಮಾಣದ ಕಾಮಗಾರಿ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದರು.

20ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಸ್ತ್ರೀ ಸರ್ಕಲ್ ನವೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಲಾಲ್ ಬಹದ್ದೂರ್ ಶಾಸ್ತ್ರೀಯವರ ಹಳೆಯ ಮೂರ್ತಿಯನ್ನು ಮತ್ತೆ ಇಡುವುದು ಗಮನಕ್ಕೆ ಬಂದಿದೆ. ಈಗಾಗಲೇ ಹಳೆಯ ಮೂರ್ತಿ ಸಂಪೂರ್ಣ ಹಾಳಾಗಿದ್ದು, ಹೊಸ ಮೂರ್ತಿಯನ್ನು ತಂದು ಇಡುಬೇಕು ಎಂದು ಸದಸ್ಯ ಸಂತೋಷ್ ಶೆಟ್ಟಿ ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಹಿರಿಯ ಸದಸ್ಯ ಮೋಹನ್‍ದಾಸ್ ಶೆಣೈ, ಎಲ್ಲಾ ಬದಲಾವಣೆಗಳನ್ನು ಮಾಡಿ ಅಲ್ಲಿಯೇ ಹಳೆಯ ಮೂರ್ತಿ ಇಡುವುದು ಸರಿಯಲ್ಲ. ಅದೇ ಮುಖ ಛಾಯೆ ಇರುವ ಹೊಸ ಮೂರ್ತಿ ಸಿಕ್ಕರೆ ಅದಕ್ಕೊಂದು ಘನತೆ ಬರುತ್ತದೆ ಎಂದರು. ಅದೇ ರೀತಿಯ ಮೂರ್ತಿ ಎಲ್ಲಿ ಸಿಗುತ್ತದೆ ಎನ್ನುವ ಮಾಹಿತಿ ಇಲ್ಲ. ಸದಸ್ಯರಲ್ಲಿ ಯಾರಾದರೂ ಇದರ ಜವಾಬ್ದಾರಿ ತೆಗೆದುಕೊಳ್ಳುವುದು ಉತ್ತಮ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.

ಮೂರು ದಿನ ನೀರಿಲ್ಲ:
ಪುರಸಭೆಯ ಖಾರ್ವಿಕೇರಿಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಮೂರು ದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಪೈಪ್‍ಲೈನ್ ಕಾಮಗಾರಿ ನಡೆಸುವುದಿದ್ದರೆ ಮೊದಲೇ ಸಾರ್ವಜನಿಕರಿಗೆ ತಿಳಿಸಿ ಮಾಡಬೇಕು. ಖಾರ್ವಿಕೇರಿ ವಾರ್ಡ್‍ಗೆ ಏನೂ ಮಾಹಿತಿ ನೀಡದೆ ಮೂರು ದಿನಗಳ ಕಾಲ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆ ಎಂದು ಸದಸ್ಯ ಚಂದ್ರಶೇಖರ್ ಖಾರ್ವಿ ಹೇಳಿದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ, ತೀವ್ರ ಮಳೆಗೆ ಪೈಪ್‍ಲೈನ್ ತುಂಡಾಗಿದ್ದರಿಂದ ಒಂದೇ ದಿನದಲ್ಲಿ ಕಾಮಗಾರಿ ಮುಗಿಸುವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾಮಗಾರಿ ನಡೆಸಲು ಸಮಸ್ಯೆಯಾಗಿದೆ. ಇದೀಗ 13 ವಾರ್ಡ್‍ಗಳಲ್ಲಿ 24 ಗಂಟೆ ನೀರಿನ ಪೂರೈಕೆ ಮಾಡುತ್ತಿದ್ದು, ಇನ್ನುಳಿದ 10 ವಾರ್ಡ್‍ಗಳಿಗೆ ಬೆಳಗ್ಗೆ 8ರಿಂದ 12ರತನಕ ನೀರು ಪೂರೈಕೆ ಮಾಡುತ್ತಿದ್ದೇವೆ. ಪಂಪು ಅಳವಡಿಸಿದ ಬಳಿಕ ಎಲ್ಲಾ ವಾರ್ಡ್‍ಗಳಿಗೂ ದಿನದ 24 ಗಂಟೆಯೂ ನೀರು ಪೂರೈಸುತ್ತೇವೆ ಎಂದರು.

ಆಡಳಿತ ಪಕ್ಷದ ನಿಲುವೇನು: ಚಂದ್ರಶೇಖರ್ ಖಾರ್ವಿ ಪ್ರಶ್ನೆ
ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಸವನ್ನು ಕುಂದಾಪುರ ಪುರಭೆಗೆ ವಿಲೇವಾರಿ ಮಾಡುವ ಕುರಿತು ಹಿಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಯಾವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ ಪ್ರಶ್ನಿಸಿದರು. ಆಡಳಿತ ಪಕ್ಷದ ಸದಸ್ಯರಲ್ಲೇ ಈ ಬಗ್ಗೆ ಭಿನ್ನಮತವಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಿ ಎಂದ ಅವರು, ನಾವು ಜನರಿಂದ ಆಯ್ಕೆಯಾದವರು ನಾಳೆ ಜನರಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ನಿಮ್ಮ ಗೊಂದಲಗಳಿಗೆ ನಮ್ಮನ್ನು ಹೊಣೆಗಾರರನ್ನಾಗಿಸಬೇಡಿ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಈ ಬಗ್ಗೆ ಇಷ್ಟರ ತನಕ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಎಲ್ಲರೊಂದಿಗೂ ಚರ್ಚಿಸಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಾಧ್ಯಮ ಮಿತ್ರರಿಗೆ ವ್ಯವಸ್ಥೆ ಸರಿಪಡಿಸಿ:
ಸಾಮಾನ್ಯ ಸಭೆಯಲ್ಲಾದ ಚರ್ಚೆಗಳನ್ನು ಪತ್ರಿಕೆ, ಟಿವಿಯ ಮುಖಾಂತರ ಜನಸಾಮಾನ್ಯರಿಗೆ ತಲುಪಿಸುತ್ತಿರುವುದು ನಮ್ಮ ಮಾಧ್ಯಮ ಸ್ನೇಹಿತರು. ಸಾಮಾನ್ಯ ಸಭೆಯಲ್ಲಿ ಅವರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೇ ಕಷ್ಟಪಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿಕೆ ಸಭೆಯ ಗಮನ ಸೆಳೆದರು. ಮಾಧ್ಯಮ ಸ್ನೇಹಿತರಿಗೆ ಕೇವಲ ಕುರ್ಚಿ ಮಾತ್ರ ಇಡಲಾಗಿದೆ. ಮುಂದಿನ ಸಭೆಯೊಳಗೆ ಅವರಿಗೆ ಬರೆದುಕೊಳ್ಳಲು ಮತ್ತು ಕ್ಯಾಮೆರಾ ಇನ್ನಿತರ ಸಲಕರಣೆಗಳನ್ನು ಇಡಲು ಡೆಸ್ಕ್ ಅಥವಾ ಮೇಜಿನ ವ್ಯವಸ್ಥೆ ಮಾಡಬೇಕು ಎಂದರು. ಇದಕ್ಕೆ ಎಲ್ಲಾ ಸದಸ್ಯರು ಧ್ವನಿಗೂಡಿಸಿದರು.

ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.


Spread the love

Leave a Reply

Please enter your comment!
Please enter your name here