
ಕುಂದಾಪುರ: ಆಂಬುಲೆನ್ಸ್, ಲಾರಿ ಹಾಗೂ ಟಿಪ್ಪರ್ ನಡುವೆ ಸರಣಿ ಅಪಘಾತ – ಮೂವರಿಗೆ ಗಾಯ
ಕುಂದಾಪುರ: ಆಂಬುಲೆನ್ಸ್, ಲಾರಿ ಹಾಗೂ ಟಿಪ್ಪರ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ಕೋಟೇಶ್ವರ ರಾ.ಹೆ 66 ರ ಬೀಜಾಡಿ ಯೂಟರ್ನ್ ಬಳಿ ಬುಧವಾರ ಸಂಭವಿಸಿದೆ.
ಆಂಬುಲೆನ್ಸ್ ನಲ್ಲಿದ್ದ ವಕ್ವಾಡಿಯ ಸಿದ್ದಯ್ಯ ಹೆಗ್ಡೆ(87), ಕುಟುಂಬಿಕರಾದ ಉದಯ ಹೆಗ್ಡೆ(49), ಸುಶೀಲ ಶೆಟ್ಟಿ(65) ಇವರಿಗೆ ಗಂಭೀರ ಗಾಯಗಳಾಗಿದ್ದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕೋಟೇಶ್ವರ ಸಮೀಪದ ವಕ್ವಾಡಿಯಿಂದ ವಯೋವೃದ್ಧ ರೋಗಿಯನ್ನು ಆಂಬುಲೆನ್ಸ್ ನಲ್ಲಿ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಆಂಬುಲೆನ್ಸ್ ಚಾಲಕ ಸರ್ವೀಸ್ ರಸ್ತೆಯಿಂದ ಹೆದ್ದಾರಿಯನ್ನು ಕ್ರಾಸ್ ಮಾಡುವ ವೇಳೆ, ಕುಂದಾಪುರದಿಂದ ಉಡುಪಿ ಕಡೆಗೆ ಬರುತ್ತಿದ್ದ ಲಾರಿಯು ಆಂಬುಲೆನ್ಸ್ ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಂಬುಲೆನ್ಸ್ ತಿರುಗಿ ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದ ಟಿಪ್ಪರಿಗೆ ಢಿಕ್ಕಿ ಹೊಡೆದಿದೆ.
ಕುಂದಾಪುರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.